

ನವೀನ್ ಚಂದ್ರ ಶೆಟ್ಟಿ ಆನೇಕಲ್
ಕೊಡಗು, ಮಂಗಳೂರು, ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದರೆ ಬೆಂಗಳೂರಿಗೆ ಹೊಂದಿಕೊಂಡಿರುವ ಆನೇಕಲ್ ತಾಲೂಕಿನಲ್ಲಿ ಮಳೆಯಿಲ್ಲದೆ ಕೆರೆ-ಕುಂಟೆ ಬತ್ತಿವೆ.
ಪಟ್ಟಣ ರಾಜಧಾನಿಯ ಕೂಗಳತೆ ದೂರದಲ್ಲಿದ್ದರೂ ನಗರವೂ ಅಲ್ಲದೇ ಅತ್ತ ಗ್ರಾಮೀಣ ಭಾಗವೂ ಅಲ್ಲದೆ ಇಲ್ಲಿನ ರೈತರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ತೆಗೆ ಕರೊನಾ ರೈತರಿಗೆ ಭಾರಿ ಹೊಡೆತ ನೀಡಿದ್ದು, ಬೆಳೆಗಳಿಗೆ ಮಾರುಕಟ್ಟೆ ಇಲ್ಲದಂತಾಗಿದೆ.
ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಕೆರೆಗಳಿದ್ದು, ಬಹುತೇಕ ಕೆರೆಗಳು ಬತ್ತಿವೆೆ. ಜಾನುವಾರುಗಳು ಕುಡಿಯುವ ನೀರಿಗೂ ತತ್ವಾರವಾಗಿದೆ. ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 20 ದಿನಗಳಿಗೊಮ್ಮೆಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, ಇದೇ ರೀತಿ ಮಳೆ ಕೈಕೊಟ್ಟರೆ ನೀರಿನ ಕ್ಷಾಮ ಎದುರಾದರೂ ಅಚ್ಚರಿ ಇಲ್ಲ.
ಪಟ್ಟಣಕ್ಕೆ ನೀರುಣಿಸುವ ದೊಡ್ಡಕೆರೆ ಸಂಪೂರ್ಣ ಒಣಗಿದ್ದು, ಜಾನುವಾರುಗಳು ನೀರಿಲ್ಲದೆ ಕೊಳಚೆ ನೀರು ಕುಡಿಯುತ್ತಿವೆ. ತಾಲೂಕಿನ ಬಹುತೇಕ ಕೆರೆಗಳಿಗೆ ನೀರು ಹರಿದು ಬರುತ್ತಿದ್ದ ರಾಜಕಾಲುವೆ ಒತ್ತುವರಿಯಾಗಿದ್ದು, ಹಲವಾರು ಬಾರಿ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಒತ್ತುವರಿ ತೆರವು ಮಾಡಬೇಕು ಎಂದು ಆಗ್ರಹಿಸಿದರೂ ಪ್ರಯೋಜನವಾಗಿಲ್ಲ.
ಬ್ಯಾಗಡದೇನಹಳ್ಳಿ, ಸರ್ಜಾಪುರ, ಮಾಯಸಂದ್ರ, ಇಂಡ್ಲವಾಡಿ ಸೇರಿ ಬಹುತೇಕ ಗ್ರಾಮಗಳ ಕೆರೆಗಳಲ್ಲೂ ನೀರಿಲ್ಲ. ಆನೇಕಲ್ ತಾಲೂಕಿನ ಗಡಿ ಗ್ರಾಮಗಳ ಕೆರೆಗಳ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ.
ಕೆರೆಗಳಿಗೆ ನೀರು ಹರಿದುಬರುವ ರಾಜಕಾಲುವೆ ಮುಚ್ಚಿವೆ. ಕೆಲವು ಕಡೆ ಅವೈಜ್ಞಾನಿಕವಾಗಿ ಕೆರೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಒಂದೆಡೆ ಮಳೆ ಇಲ್ಲದೆ ರೈತ ಕಂಗಾಲಾಗಿದ್ದು, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ರಾಜ್ಯ ಸರ್ಕಾರ ಶೀಘ್ರ ತಾಲೂಕಿನ ಕೆರೆಗಳನ್ನು ತುಂಬಿಸುವ ಶಾಶ್ವತ ಯೋಜನೆ ಪೂರ್ಣಗೊಳಿಸಬೇಕು. ಶ್ರೀನಿವಾಸ್, ದೊಡ್ಡಹಾಗಡೆ ರೈತ ಕೆರೆಗಳನ್ನು ಸ್ವಚ್ಛ ಮಾಡುವ ಕಾರ್ಯ ಆಗುತ್ತಿಲ್ಲ. ಈಗಾಗಲೇ ಕೆರೆಗಳಲ್ಲಿ ನೀರಿಲ್ಲದೆ ಸಾವಿರಾರು ಅಡಿ ಕೊಳವೆಬಾವಿ ತೋಡಿದರೂ ನೀರು ಬರುತ್ತಿಲ್ಲ. ಎಲ್ಲೆಡೆ ಮಳೆಯಾಗುತ್ತಿದ್ದರೂ ಆನೇಕಲ್ ತಾಲೂಕಿನಲ್ಲಿ ಸಮರ್ಪಕವಾಗಿ ಮಳೆಯೂ ಆಗುತ್ತಿಲ್ಲ, ರೈತರು ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಲಿದ್ದಾರೆ. ತಿಮ್ಮರಾಜು, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರೈತರು ಕೃಷಿ ಹೊಂಡ ತೋಡಿ ಮಳೆನೀರು ಶೇಖರಣೆ ಮಾಡಿಕೊಳ್ಳಬಹುದು. ಸರ್ಕಾರದಿಂದ ಇದಕ್ಕೆ ಹಣ ನೀಡಲಾಗುತ್ತದೆ. ಉದ್ಯೋಗ ಖಾತ್ರಿ ಯೋಜನೆಯಡಿ ಸ್ವತಃ ರೈತರೇ ಹೊಂಡ ತೋಡಿಕೊಂಡರೆ ಅದಕ್ಕೆ ಹಣವನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ನೀಡುತ್ತದೆ. ದೇವರಾಜೇಗೌಡ, ತಾಪಂ ಇಒ