ಆನೇಕಲ್​ನಲ್ಲಿ ಒಣಕರಗ ಸಂಪನ್ನ

17 04 2025_BGR RURAL_PAGE_2
Published on

ಆನೇಕಲ್​: ತಿಗಳರ ಸಾಂಪ್ರದಾಯಿಕ ಆಚರಣೆ ಒಣ ಕರಗ ಉತ್ಸವ ಆನೇಕಲ್​ನಲ್ಲಿ ಅದ್ದೂರಿಯಾಗಿ ನೆರವೇರಿತು.

ಶ್ರೀ ಧರ್ಮರಾಯಸ್ವಾಮಿ ದೇಗುಲದ ಶ್ರೀ ದ್ರೌಪದಿ ದೇವಿಯ ಹಸಿಕರಗ ಸೋಮವಾರ ನಡೆದಿದ್ದು, ನಂತರ ಮಂಗಳವಾರ ರಾತ್ರಿ ಒಣ ಕರಗ ಉತ್ಸವ ಸಂಪನ್ನವಾಯಿತು.

ಹಸಿ ಕರಗ ಹಾಗೂ ಒಣ ಕರಗ ನಡೆಯುವುದು ಆನೇಕಲ್​ನಲ್ಲಿ ಮಾತ್ರ. ಬುಧವಾರ ಬೆಳಗಿನ ಜಾವ 3.25ಕ್ಕೆ ಕರಗ ಹೊತ್ತ ಪೂಜಾರಿ ರಮೇಶ್​ ದೇವಾಲಯದಿಂದ ಹೊರ ಬರುತ್ತಿದ್ದಂತೆ ವೀರ ಕುಮಾರರ ಗೋವಿಂದ ನಾಮಸ್ಮರಣೆ ಮುಗಿಲು ಮುಟ್ಟಿತ್ತು. ದೇವಾಲಯದಿಂದ ಹೊರಬಂದ ಕರಗ ಹೊತ್ತ ಪೂಜಾರಿ ರಮೇಶ್​ ಸಂತೆ ಮಾಳದಲ್ಲಿ ನಿರ್ಮಿಸಿದ್ದ ಕೆಂಡದ ಹೊಂಡದಲ್ಲಿ ಕುಣಿದು ಬಳಿಕ ದೇವಾಲಯದ ಬಳಿ ನಿರ್ಮಿಸಿದ್ದ ವೀರ ವಸಂತನ ಶಿರಚ್ಛೇದ ಮಾಡುವ ಸನ್ನಿವೇಶದ ಸಂದರ್ಭದಲ್ಲಿ ಕುಣಿದು ಅಬ್ಬರಿಸಿದರು. ಅಲ್ಲಿಂದ ಪಟ್ಟಣದ ಪ್ರಮುಖ ವೃತ್ತಗಳಾದ ತಿಲಕ್​, ತ್ಯಾಗರಾಜ ರಸ್ತೆ, ನಗರ್ತರ ಪೇಟೆ, ಗಂಗಮ್ಮನ ಗುಡಿ, ಚರ್ಚ್​ ರಸ್ತೆ, ಉಳ್ಲಿ ತಿಗತಳ ಬೀದಿ, ಅಂಬೇಡ್ಕರ್​ ಪ್ರತಿಮೆ, ಮರಾಠಾ ಬೀದಿ, ಆದಿ ಜಾಂಬವ ನಗರ, ಹೊಸೂರು ಬಾಗಿ ರಸ್ತೆ, ಯಲ್ಲಮ್ಮ ದೇವಾಲಯ, ಬಸವಣ್ಣ ಬೀದಿ, ಕೆಇಬಿ ಕಚೇರಿ, ಶ್ರೀರಾಮ ಮಂದಿರ ವೃತ್ತದ ಮೂಲಕ ಅದ್ದೂರಿಯಾಗಿ ಮೆರವಣಿಗೆ ಸಾಗಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೂವಿನ ಹಾಸಿಗೆ ಹಾಕಿ ದೇವಿ ಉತ್ಸವವನ್ನು ಬರಮಾಡಿಕೊಳ್ಳಲಾಯಿತು. ದೇವಿ ಬರುತ್ತಿದ್ದಂತೆ ಆರತಿ, ಪೂಜೆ ಮಾಡಿ ಮಡಿಲು ತುಂಬಿಸಿಕೊಂಡರು. ಬೆಳಗ್ಗೆ 5.56ಕ್ಕೆ ಕರಗ ವಾಪಸ್​ ದೇವಸ್ಥಾನಕ್ಕೆ ಮರಳಿತು. ಕರಗದ ಸಮಯದಲ್ಲಿ ಯಾವುದೇ ಅಹಿತಕರ ಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್​ ಕೈಗೊಂಡಿದ್ದರು.

ಕಟ್ಟಡದ ಇಕ್ಕೆಲಗಳಲ್ಲಿ ಭಕ್ತಸಾಗರ : ಬೆಂಗಳೂರಿನ ಕರಗ ಮುಗಿದ ಬಳಿಕ ಆನೇಕಲ್​ ಒಣ ಕರಗ ನೋಡಲು ಸಹಸ್ರಾರು ಭಕ್ತರು ಆಗಮಿಸಿದ್ದರಿಂದ ಪಟ್ಟಣದಾದ್ಯಂತ ಕಟ್ಟಡಗಳಲ್ಲಿ ಭಕ್ತರೇ ತುಂಬಿತುಳುಕುತ್ತಿದ್ದರು. ಕರಗ ಉತ್ಸವ ಸಾಗುತ್ತಿದ್ದ ಚೌಡೇಶ್ವರಿ ದೇವಾಲಯ ವೃತ್ತದಲ್ಲಿ ಅಂಬೇಡ್ಕರ್​ ಪ್ರತಿಮೆ ಸ್ಥಾಪಿಸಿದ್ದು, ಕರಗ ಮುಂದೆ ಸಾಗಿದ ಬಳಿಕ ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು.

ಎರಡೂವರೆ ಗಂಟೆಗೆ ಸೀಮಿತ : ಪ್ರತಿ ಬಾರಿ ಕರಗ ದೇವಾಲಯದಿಂದ ಹೊರಗೆ ಬಂದು 4 ಗಂಟೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸುತ್ತಿತ್ತು. ಆದರೆ, ಈ ಬಾರಿ ಎರಡೂವರೆ ಗಂಟೆಗಳು ಮಾತ್ರ ಕರಗ ಸಂಚಾರ ಮಾಡಿ ದೇವಾಲಯಕ್ಕೆ ಮರಳಿತು.

ಕರಗ ಉತ್ಸವಕ್ಕೆ ಅರ್ಚಕರು ಹಾಗೂ ಕುಲಸ್ಥರ ನಡುವೆ ವ್ಯಾಜ್ಯ ಇದೆ. ಈ ಬಾರಿ ಕೊನೇ ಹಂತದಲ್ಲಿ ಕುಲಸ್ಥರ ಪರವಾಗಿ ತಹಸೀಲ್ದಾರರು ಆದೇಶ ಮಾಡಿದ್ದ ಉತ್ಸವಕ್ಕೆ ಕೋರ್ಟ್​ ತಡೆ ನೀಡಿತ್ತು. ಇದಾದ ಬಳಿಕ ಚಂದ್ರಪ್ಪ ಬದಲು ಅರ್ಚಕ ರಮೇಶ್​ ಕರಗ ಹೊತ್ತಿದ್ದಾರೆ. ಆದರೆ ಕುಲಸ್ಥರ ಪರವಾಗಿ ಚಂದ್ರಪ್ಪನಂತೆ ರಮೇಶ್​ ಹೆಜ್ಜೆಹಾಕಿ ಕುಣಿದಿಲ್ಲ, ಉತ್ಸವಕ್ಕೆ ಇನ್ನಷ್ಟು ಮೆರುಗು ಬೇಕಿತ್ತು ಎನ್ನುವ ಮಾತುಗಳು ಕೇಳಿಬಂದಿವೆ.

ಕುಣಿತ ಮನಮೋಹಕ : ಹಸಿಕರಗ ಉತ್ಸವದಲ್ಲಿ ಕೆಲವು ವೃತ್ತಗಳಲ್ಲಿ ಕರಗ ಕುಣಿದಿರಲಿಲ್ಲ. ಒಣ ಕರಗ ಉತ್ಸವದಲ್ಲಿ ಪ್ರತಿ ರಸ್ತೆ ದೇವಾಲಯಗಳು ಹಾಗೂ ಪ್ರಮುಖ ಬೀದಿಗಳಲ್ಲಿ ಕರಗ ಹೊತ್ತು ಸಾಗುತ್ತಿದ್ದಾಗ ರಮೇಶ್​ ರಾಗದ ಮೋಡಿಗೆ ಹೆಜ್ಜೆಹಾಕಿ ಕುಣಿಯುತ್ತಿದ್ದರೆ ನೆರೆದಿದ್ದ ಭಕ್ತರು ಹಷೋರ್ದ್ಗಾರ ಮಾಡಿದರು.

ಸಂತೆಮಾಳದಲ್ಲಿ ಕೆಂಡಸೇವೆ : ಒಣ ಕರಗ ಉತ್ಸವದ ಸಂತೆಮಾಳದಲ್ಲಿ ಕರಗ ಹೊತ್ತ ರಮೇಶ್​ ಅಗ್ನಿಕುಂಡದಲ್ಲಿ ಬೆಂಕಿಯ ಮೇಲೆ ಕುಣಿದಾಡಿದಾಗ ಜನ ಗೋವಿಂದ ಗೋವಿಂದ ಎಂದು ಜೋರಾಗಿ ಕೂಗಿದರು.

ಕೆಲವೆಡೆ ಸಂಚಾರ ಇಲ್ಲ : ಕರಗ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗಾಂಭೀರ್ಯದಿಂದ ಸಂಚರಿಸಿ ನೃತ್ಯಮಾಡುವ ಮೂಲಕ ದೇವಿ ಎಲ್ಲರನ್ನು ಸಂತೈಸುತ್ತಾರೆ ಎನ್ನುವ ನಂಬಿಕೆ ಇದೆ. ಆದರೆ ಪಟ್ಟಣದ ದೇವರ ಕೊಂಡಪ್ಪ ವೃತ್ತ ಸೇರಿ ಕೆಲವು ಕಡೆ ಕರಗ ಹೋಗದೆ ಕಾಯುತ್ತಿದ್ದ ಜನ ಬೇಸರಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net