ವಿಜಯಪುರ ಎಪಿಎಂಸಿಯಲ್ಲಿ ಒಣ ಮೆಣಸಿನಕಾಯಿ ವ್ಯಾಪಾರ ಆರಂಭ

mm 28-4 press
ವಿಜಯಪುರದ ವ್ಯಾಪಾರಸ್ಥರ ಸಂಘದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರವೀಂದ್ರ ಬಿಜ್ಜರಗಿ ಮಾತನಾಡಿದರು. ನೀಲೇಶ ಶಹಾ, ಜಯಾನಂದ ತಾಳಿಕೋಟಿ, ಮನೋಜ್ ಬಗಲಿ ಮತ್ತಿತರರಿದ್ದಾರೆ.
Published on

ವಿಜಯಪುರ: ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಣಸಿಕಾಯಿ ವ್ಯಾಪಾರ ವಹಿವಾಟು ಆರಂಭಿಸಲಿದ್ದು, ಜಿಲ್ಲೆಯ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಹೇಳಿದರು.

ನಗರದ ಎಪಿಎಂಸಿಯಲ್ಲಿ ವಾರದಲ್ಲಿ ಎರಡು ದಿನ ಮಂಗಳವಾರ ಮತ್ತು ಶುಕ್ರವಾರ ಇ-ಟೆಂಡರ್ ಪ್ರಕ್ರಿಯೆ ಮೂಲಕ ಒಣ ಮೆಣಸಿನಕಾಯಿ ವಹಿವಾಟು ನಡೆಯಲಿದೆ. ಮಾ. 4 ಮತ್ತು ಮಾ. 7 ರಂದು ಇದು ಕಾರ್ಯಾರಂಭಗೊಳ್ಳಲಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆದ ಮೆಣಸಿನಕಾಯಿಯನ್ನು ದೂರದ ಊರಿಗೆ ಸಾಗಿಸದೆ ವಿಜಯಪುರ ಮಾರುಕಟ್ಟೆಗೆ ತರಬೇಕೆಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಸದ್ಯ ವಿಜಯಪುರ, ಬಾಗಲಕೋಟೆ ಸೇರಿ ರಾಜ್ಯದ ವಿವಿಧೆಡೆ ಸೇರಿ ಮಹಾರಾಷ್ಟ್ರದ ಇತರ ಜಿಲ್ಲೆಗಳಲ್ಲಿ ಮೆಣಸಿನಕಾಯಿಯನ್ನು ವಿಪುಲವಾಗಿ ಬೆಳೆಯುತ್ತಿದ್ದು, ಒಣಗಿಸಿ ರೈತರು ವಿಲೇವಾರಿಗಾಗಿ 300 ರಿಂದ 350 ಕಿಮೀ ದೂರದ ಬ್ಯಾಡಗಿ ಮಾರುಕಟ್ಟೆಗೆ ಸಾಗಿಸುತ್ತಾರೆ. ಅದರಿಂದ ರೈತರಿಗೆ ಸಾಗಾಣಿಕೆ ವೆಚ್ಚ ಹಾಗೂ ಹಮಾಲಿ ದರ ಹೊರೆಯಾಗಲಿದೆ. ಸಮಯ ಹಾಗೂ ಶ್ರಮವೂ ವ್ಯರ್ಥವಾಗುತ್ತಿದೆ. ಅಲ್ಲದೆ, ಒಣ ಮೆಣಸಿನಕಾಯಿ ಬೇಗ ವಿಲೇವಾರಿವಾಗದಿದ್ದರೆ ಹಾಳಾಗುವ ಪ್ರಸಂಗಗಳೂ ಹೆಚ್ಚು, ರೈತರ ಈ ಸಮಸ್ಯೆ ಮನಗಂಡು ಒಣ ಮೆಣಸಿನಕಾಯಿ ವಹಿವಾಟು ಪ್ರಾರಂಭಿಸಲು ಮುಂದಾಗಿರುವುದಾಗಿ ಅವರು ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ನೀಲೇಶ ಶಹಾ, ಸದಸ್ಯರಾದ ಜಯಾನಂದ ತಾಳಿಕೋಟಿ, ಮನೋಜ್ ಬಗಲಿ, ಪ್ರವೀಣ ವಾರದ, ರಮೇಶ ನಿಡೋಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net