

ಹುಬ್ಬಳ್ಳಿ: ನಗರದ ಮೂರುಸಾವಿರ ಮಠದ ಆವರಣದಲ್ಲಿ ಏರ್ಪಡಿಸಿದ್ದ 3 ದಿನಗಳ ಒಣಮೆಣಸಿನಕಾಯಿ ಮೇಳ ಸೋಮವಾರ ತೆರೆಕಂಡಿತು.
ಈ ಅವಧಿಯಲ್ಲಿ ಅಂದಾಜು 72 ಲಕ್ಷ ರೂ. ವಹಿವಾಟು ನಡೆದಿದ್ದು, 33 ಟನ್ ಒಣಮೆಣಸಿನಕಾಯಿ ಮಾರಾಟವಾಗಿದೆ. ಅಂದಾಜು 4 ಸಾವಿರ ಜನ ಪಾಲ್ಗೊಂಡಿದ್ದರು. ಮೇಳದ ಮೊದಲ ದಿನ 8 ಟನ್ ಒಣ ಮೆಣಸಿನಕಾಯಿ ಮಾರಾಟವಾಗಿದ್ದು, 12 ಲಕ್ಷ ರೂ. ವಹಿವಾಟು, 2ನೇ ದಿನ 14 ಟನ್ ಮಾರಾಟ ಹಾಗೂ 35 ಲಕ್ಷ ರೂ. ವಹಿವಾಟು ಹಾಗೂ ಕೊನೆಯ ದಿನವಾದ ಸೋಮವಾರ 11 ಟನ್ ಮಾರಾಟವಾಗಿದ್ದು, 25 ಲಕ್ಷ ರೂ. ವಹಿವಾಟು ನಡೆಯಿತು. ಕಳೆದ ವರ್ಷ 45 ಟನ್ ಒಣಮೆಣಸಿನಕಾಯಿ ಮಾರಾಟವಾಗಿದ್ದು, 65 ಲಕ್ಷ ರೂ. ವಹಿವಾಟು ನಡೆದಿತ್ತು. ಒಣಮೆಣಸಿನಕಾಯಿ ಮಾರಾಟಕ್ಕಾಗಿ 100 ಮಳಿಗೆಗಳನ್ನು ಹಾಕಿದ್ದು, ಎಲ್ಲ ಮಳಿಗೆದಾರರಿಗೆ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿಯಿಂದ ಪ್ರಮಾಣಪತ್ರ ವಿತರಿಸಲಾಯಿತು. ತೋಟಗಾರಿಕೆ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಅಮರಶಿವ ಹಾಗೂ ಉಳುವಾಯೋಗಿ ರೈತ ಉತ್ಪಾದಕ ಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಈ ಮೇಳ ಆಯೋಜಿಸಿತ್ತು.
ರಾಜ್ಯ ಸಾಂಬಾರು ಪದಾರ್ಥ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ನಾರಾಯಣಪೂರ, ಪ್ರಧಾನ ವ್ಯವಸ್ಥಾಪಕ ಚಿದಾನಂದಪ್ಪ ಪಿ.ಜಿ., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಮಚಂದ್ರ ಮಡಿವಾಳರ ಇತರರಿದ್ದರು.