ಭವಿಷ್ಯದ ಬದುಕಿಗೆ ಕುತ್ತುತರಲಿದೆ ಕುಡಿತ

8 TKE 2
Published on

ತರೀಕೆರೆ: ಕುಟುಂಬದವರ ನೆಮ್ಮದಿಯ ಜೀವನಕ್ಕಾಗಿ ವ್ಯಸನ ಮುಕ್ತರಾಗಿ ನವ ಜೀವನ ಆರಂಭಿಸಬೇಕು ಎಂದು ಹಣ್ಣೆ ಮಠದ ಶ್ರೀ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಲಕ್ಕವಳ್ಳಿ ಗಣಪತಿ ಪೆಂಡಾಲ್‌ನಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಗ್ರಾಪಂ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಏರ್ಪಡಿಸಿದ್ದ 1890ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಕುಡಿತ ಆರೋಗ್ಯ ಹದಗೆಡಿಸುವ ಜತೆಗೆ ಇಡೀ ಜೀವನ ಹಾಳು ಮಾಡುತ್ತದೆ. ಕ್ಷಣಿಕ ಸಂತೋಷಕ್ಕಾಗಿ ದುಶ್ಚಟ ಮೈಗೂಡಿಸಿಕೊಳ್ಳುವುದು ಒಳ್ಳೆಯ ಬೆಳವಣಿಗೆಯಲ್ಲ. ಕುಡಿತದಿಂದ ಆರ್ಥಿಕ ಮುಗ್ಗಟ್ಟು ಎದುರಾಗುವ ಜತೆಗೆ ಎಲ್ಲರ ಭವಿಷ್ಯಕ್ಕೂ ಕುತ್ತು ಉಂಟಾಗಲಿದೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಮಾಜಿಕ ಕಾಳಜಿ ಹೊಂದಿರುವುದು ಮಾತ್ರವಲ್ಲ ಮಹಿಳೆಯರು ಮತ್ತು ಕೆಳವರ್ಗದವರ ನಾಡಿಮಿಡಿತ ಅರಿತು ಕೆಲಸ ಮಾಡುತ್ತಿದೆ. ರಾಜ್ಯದ ಉದ್ದಗಲಕ್ಕೂ ಮದ್ಯವರ್ಜನ ಶಿಬಿರ ಆಯೋಜಿಸಿ ಅಸಂಖ್ಯಾತ ವ್ಯಸನಿಗಳ ಮನ ಪರಿವರ್ತಿಸುವ ಕಾಯಕದಲ್ಲಿ ತೊಡಗಿದೆ. ಶಿಬಿರಾರ್ಥಿಗಳು ದುಶ್ಚಟದಿಂದ ದೂರವಿರುವ ಸಂಕಲ್ಪ ಮಾಡಿ ಕುಟುಂಬಸ್ಥರ ಬಾಳಿಗೆ ಬೆಳಕಾಗಬೇಕು ಎಂದು ಹೇಳಿದರು.

ಜಿಲ್ಲಾ ಜನ ಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ಮಾತನಾಡಿ, ಶಾಲೆಯಲ್ಲಿ ನೀಡುವ ಶಿಕ್ಷಣ ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸಾಲದು. ಜೀವನ ಎಂಬ ಪರೀಕ್ಷೆಯಲ್ಲಿ ಪಾಸಾಗಿ ಸಂಸ್ಕಾರಯುತ ಬದುಕು ರೂಪಿಸಿಕೊಳುವುದನ್ನು ಕಲಿಯಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಾಜ್ಯದಲ್ಲಿ ಮಾದರಿ ಹೆಜ್ಜೆ ಇಟ್ಟಿದ್ದು, ಮದ್ಯವರ್ಜನ ಶಿಬಿರಗಳ ಮೂಲಕ ಅದೆಷ್ಟೋ ವ್ಯಸನಿಗಳ ಬದುಕು ಬದಲಾಯಿಸಿದೆ ಎಂದರು.

ಗ್ರಾಪಂ ಸದಸ್ಯೆ ಭವಾನಿ, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಎ.ಸಿ.ಚಂದ್ರಪ್ಪ, ಸದಸ್ಯರಾದ ಟಿ.ಆರ್.ಶ್ರೀಧರ್, ಕೆ.ಎಸ್.ರಮೇಶ್, ಮಲ್ಲಪ್ಪ, ಅಸ್ಲಾಂಖಾನ್, ಮೂಡಲ ಗಿರಿಯಪ್ಪ, ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ, ತಾಲೂಕು ಯೋಜನಾಧಿಕಾರಿ ಕೆ.ಕುಸುಮಧರ್, ಮೇಲ್ವಿಚಾರಕ ಸುರೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net