

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಮೇಲಿನ ಮುಗ್ಗದ ಆನೆಪಲ್ಲ ಎಂಬಲ್ಲಿ ಭಾನುವಾರ ಮಧ್ಯರಾತ್ರಿ ಮದ್ಯ ಸೇವಿಸಿ ಜಗಳವಾಡಿದ ತಂದೆಯನ್ನು ಮಕ್ಕಳಿಬ್ಬರು ಕೊಲೆ ಮಾಡಿದ್ದಾರೆ.
ಧರ್ಣಪ್ಪ ಪೂಜಾರಿ ಯಾನೆ ಕೊರಗಪ್ಪ ಪೂಜಾರಿ(61) ಕೊಲೆಯಾದವರು. ಮಕ್ಕಳಾದ ಮೋನಪ್ಪ ಪೂಜಾರಿ(34) ಮತ್ತು ನವೀನ(30) ಆರೋಪಿಗಳು. ಕತ್ತಿಯಿಂದ ಹಾಗೂ ಅಡಕೆ ಮರದ ಸಲಾಕೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಮೂರ್ತೆದಾರಿಕೆ ಹಾಗೂ ಕೂಲಿ ವೃತ್ತಿ ಮಾಡುತ್ತಿದ್ದ ಧರ್ಣಪ್ಪ ಪೂಜಾರಿ ಮದ್ಯ ವ್ಯಸನಿಯಾಗಿದ್ದು, ಮನೆಯವರಿಗೆ ಹಿಂಸೆ ನೀಡುತ್ತಿದ್ದರೆನ್ನಲಾಗಿದೆ. ಧರ್ಣಪ್ಪ ಪೂಜಾರಿಯವರಿಗೆ ಮೂವರು ಹೆಣ್ಣುಮಕ್ಕಳು ಹಾಗೂ ಇಬ್ಬರು ಪುತ್ರರಿದ್ದು, ಬೇರೆಯೇ ವಾಸ್ತವ್ಯ ಹೊಂದಿದ್ದಾರೆ.
ಧರ್ಣಪ್ಪ ಪೂಜಾರಿಯವರ ಮನೆಯ ಪಕ್ಕದಲ್ಲೇ ಅವರ ಸಹೋದರನ ಮನೆಯಿದ್ದು, ಭಾನುವಾರ ಮಧ್ಯಾಹ್ನ ಅಲ್ಲಿ ದೈವಗಳಿಗೆ ತಂಬಿಲ ಸೇವೆ ಇತ್ತು. ಕಾರ್ಯಕ್ರಮದಲ್ಲಿ ಐವರೂ ಮಕ್ಕಳು ತೆರಳಿದ್ದರು. ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಜಗಳವಾಡಿದ್ದ ಧರ್ಣಪ್ಪ, ಮಕ್ಕಳು ಮನೆಗೆ ಬಂದಾಗಲೂ ಜಗಳ ಕಾಯ್ದು ಕತ್ತಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದರೆನ್ನಲಾಗಿದೆ. ಈ ವೇಳೆ ಹೊಕೈ ನಡೆದು ಮಕ್ಕಳು ಅದೇ ಕತ್ತಿಯಲ್ಲಿ ತಂದೆಗೆ ಕಡಿದಿದ್ದು, ಅಡಕೆ ಮರದ ಸಲಾಕೆಯಿಂದಲೂ ಹಲ್ಲೆ ನಡೆಸಿದ್ದಾರೆ. ರಾತ್ರಿ 11.45ರಿಂದ 12.15ರ ನಡುವೆ ಘಟನೆ ನಡೆದಿದೆ.
ಡಿವೈಎಸ್ಪಿ ದಿನಕರ ಶೆಟ್ಟಿ, ಪುತ್ತೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ಈರಯ್ಯ ಹಾಗೂ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.