

ಚಿಕ್ಕಬಳ್ಳಾಪುರ: ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು ಅಪರಾಧ. ಇದರ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುತ್ತಿರುವುದರ ಜತೆಗೆ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಪೊಲೀಸರು ದಂಡ ವಿಧಿಸಿ, ಎಚ್ಚರಿಕೆ ಕೊಡುತ್ತಿದ್ದಾರೆ. ಇದರ ನಡುವೆಯೂ ಅಸಡ್ಡೆ ನಿಂತಿಲ್ಲ. ಇಂತಹ ನಿರ್ಲಕ್ಷ್ಯ ಧೋರಣೆಗೆ ಇಲ್ಲಿ ದ್ವಿಚಕ್ರ ವಾಹನ ಸವಾರ ಬಲಿಯಾಗಿದ್ದಾನೆ.
ಚಿಂತಾಮಣಿ ತಾಲೂಕಿನ ತಿಮ್ಮಸಂದ್ರದ ಇಂಡಿಯನ್ ಪೆಟ್ರೋಲ್ ಬಂಕ್ ಸಂಭವಿಸಿದ ಅಪಘಾತದಲ್ಲಿ ಚೌಡರೆಡ್ಡಿಪಾಳ್ಯದ ವೆಂಕಟರೆಡ್ಡಿ (42) ಮೃತಪಟ್ಟಿದ್ದಾರೆ. ಮದ್ಯ ಸೇವಿಸಿ ಕಾರನ್ನು ರ‍್ರಾಬರ‍್ರಿ ಓಡಿಸಿದ ಚಾಲಕ ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ರಸ್ತೆಯ ಆದಿನಾರಾಯಣ್.
ಚಿಂತಾಮಣಿ ತಾಲೂಕಿನ ಚಿನ್ನಗುಟ್ಟಪಲ್ಲಿ ಗ್ರಾಮದ ವೆಂಕಟರೆಡ್ಡಿಯು ಪತ್ನಿ ಭಾಗ್ಯಮ್ಮರೊಂದಿಗೆ ದ್ವಿಚಕ್ರ ವಾಹನದಲ್ಲಿ ಶಿಡ್ಲಘಟ್ಟದತ್ತ ಹೋಗುತ್ತಿದ್ದ ಸಂದರ್ಭದಲ್ಲಿ ಮಾರುತಿ ಬೊಲೆನೋ ಕಾರು ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಗಾಯಗೊಂಡಿದ್ದ ವೆಂಕಟರೆಡ್ಡಿಯು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ಅಪಘಾತ ಎಸಗಿದ ಕಾರಿನ ಚಾಲಕ ಆದಿನಾರಾಯಣ್ ಕಾರು ಚಾಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಮದ್ಯ ಸೇವಿಸಿದ್ದ. ಈತನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು, ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.