ಕಾರ್ಮಿಕರ ಕೊರತೆಗೆ ಡ್ರಮ್‌ಸೀಡರ್ ಪರಿಹಾರ

29mdk02
Published on

ಮಡಿಕೇರಿ:

ಕೊಡಗಿನಲ್ಲಿ ಉತ್ತಮ ಮಳೆ ಆಗಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಾಣ ಆಗಿದೆ. ಮಳೆಯಾಶ್ರಿತ ಗದ್ದೆಗಳಲ್ಲಿ ಭತ್ತದ ಕೃಷಿಗಾಗಿ ಸಿದ್ಧತೆಗಳು ಭರದಿಂದ ನಡೆದಿದ್ದು, ಉಳುಮೆ ಕಾರ್ಯ ಪ್ರಗತಿಯಲ್ಲಿದೆ. ಭತ್ತದ ನಾಟಿ ಕೆಲಸಕ್ಕೆ ಕಾರ್ಮಿಕರ ಕೊರತೆ ದೊಡ್ಡ ಸಮಸ್ಯೆಯಾಗಿರುವುದರಿಂದ ಪರ್ಯಾಯ ಮಾರ್ಗದ ಹುಡುಕಾಟದಲ್ಲಿ ಇರುವ ರೈತರು ಡ್ರಮ್ ಸೀಡರ್‌ಗಳ ಮೊರೆ ಹೋಗಿದ್ದಾರೆ. ಈ ಯಂತ್ರದ ಸಹಾಯದಿಂದ ಭತ್ತವನ್ನು ನೇರವಾಗಿ ಬಿತ್ತನೆ ಮಾಡಲು ಸಾಧ್ಯವಾಗುವುದರಿಂದ ಹೆಚ್ಚು ಕಾರ್ಮಿಕರ ಅಗತ್ಯ ಬೀಳುವುದಿಲ್ಲ.

ಒಂದೊಮ್ಮೆ ಭತ್ತದ ಕಣಜ ಎಂದು ಕರೆಯಲಾಗುತ್ತಿದ್ದ ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಭತ್ತ ಬೆಳೆಯುವ ಪ್ರದೇಶ ಕ್ಷೀಣಿಸುತ್ತಿದೆ. ಭತ್ತ ಕೃಷಿ ಲಾಭದಾಯಕ ಅಲ್ಲ ಎನ್ನುವುದು ಇದಕ್ಕೆ ಪ್ರಮುಖ ಕಾರಣವಾದರೆ, ಅಗತ್ಯ ಸಂದರ್ಭದಲ್ಲಿ ಕಾರ್ಮಿಕರು ಸಿಗದಿರುವುದರಿಂದಲೂ ಬಹುತೇಕ ರೈತರು ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ಕೆಲವರು ಅಡಿಕೆ, ಕಾಫಿ ತೋಟಗಳನ್ನಾಗಿಯೂ ಪರಿವರ್ತಿಸಿದ್ದಾರೆ. ನಗರ ಪ್ರದೇಶಗಳಲ್ಲಿ ಭತ್ತದ ಗದ್ದೆಗಳು ನಿವೇಶನಗಳಾಗಿ ಮಾಡಿ ಮಾರಾಟ ಮಾಡಿ ಮನೆಗಳನ್ನು ಕಟ್ಟಿಕೊಳ್ಳಲಾಗಿದೆ.

ಉತ್ತಮ ನೀರಿನ ಸೌಕರ್ಯ ಇರುವ ಮಳೆಯಾಶ್ರಿತ ಪ್ರದೇಶಗಳು, ತೋಟ ಮಾಡಲು ಸಾಧ್ಯವಾಗದ ಜವುಗು ಭೂಮಿ, ಹಾರಂಗಿ ಮತ್ತು ಚಿಕ್ಲಿಹೊಳೆ ಅಚ್ಚುಕಟ್ಟು ಪ್ರದೇಶದ ಸುಮಾರು ೩೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸದ್ಯ ಭತ್ತ ಬೆಳೆಯಲಾಗುತ್ತಿದೆ. ಕೃಷಿ ಇಲಾಖೆ ಮಾಹಿತಿ ಪ್ರಕಾರ ಮಡಿಕೇರಿ ತಾಲೂಕಿನಲ್ಲಿ ೬,೫೦೦ ಹೆ., ಸೋಮವಾರಪೇಟೆ ತಾಲೂಕಿನಲ್ಲಿ ೭,೬೦೦ ಹೆ., ವಿರಾಜಪೇಟೆ ತಾಲೂಕಿನಲ್ಲಿ ೧೪,೦೦೦ ಹೆ. ಹಾಗೂ ಹಾರಂಗಿ ಮತ್ತು ಚಿಕ್ಲಿಹೊಳೆ ಅಚ್ಚುಕಟ್ಟು ಪ್ರದೇಶದ ೨,೪೦೦ ಹೆ. ಪ್ರದೇಶವನ್ನು ಭತ್ತ ಬೆಳೆಯಲು ಬಳಸಿಕೊಳ್ಳಲಾಗುತ್ತಿದೆ.

ಜುಲೈ ಮೊದಲ ವಾರದ ತನಕ ಮಳೆಯ ಅಭಾವ ಇದ್ದ ಕಾರಣ ಭತ್ತ ಬೆಳೆಯುವ ರೈತರಲ್ಲಿ ಈ ಬಾರಿ ಆತಂಕ ಕಾಣಿಸಿಕೊಂಡಿತ್ತು. ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯಗಳು ಖಾಲಿ ಇದ್ದುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಮಾತ್ರವಲ್ಲದೆ ಮಳೆಯಾಶ್ರಿತ ಪ್ರದೇಶದ ರೈತರೂ ಈ ಬಾರಿ ಭತ್ತ ಬೆಳೆಯುವುದು ಸಾಧ್ಯವಿಲ್ಲ ಎಂದೇ ನಂಬಿದ್ದರು. ಆದರೆ ಜುಲೈ ಕೊನೆಯ ವಾರದಲ್ಲಿ ಸುರಿದ ಮಳೆಯಿಂದ ಜಿಲ್ಲೆಯ ಎರಡೂ ಜಲಾಶಯಗಳು ಭರ್ತಿ ಆಗಿದೆ. ಮಳೆಯಾಶ್ರಿತ ಪ್ರದೇಶಗಳಲ್ಲೂ ಭತ್ತ ಕೃಷಿಗೆ ಅನುಲಕೂಲಕರ ವಾತಾವರಣ ನಿರ್ಮಾಣ ಆಗಿರುವುದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ನೀರಿನ ಅನುಕೂಲ ಆಗುತ್ತಿದ್ದಂತೆಯೇ ರೈತರು ಚುರುಕಾಗಿದ್ದಾರೆ. ಹಲವೆಡೆ ಬಿತ್ತನೆ ಕಾರ್ಯ ನಡೆದಿದೆ. ನಾಟಿ ಕೆಲಸಕ್ಕಾಗಿ ಗದ್ದೆಯ ಉಳುಮೆ ಕಾರ್ಯ ಪ್ರಗತಿಯಲ್ಲಿದೆ. ನಾಟಿ, ಕಳೆ, ಕಟಾವು ಸೇರಿದಂತೆ ಭತ್ತ ಕೃಷಿಗೆ ಹೆಚ್ಚು ಕಾರ್ಮಿಕರ ಅಗತ್ಯವಿರುವುದರಿಂದ ಬಹುತೇಕ ರೈತರು ಈ ಕೃಷಿ ಮಾಡಲು ಹಿಂದೇಟು ಹಾಕುತ್ತಿರುವಂತೆಯೇ ನಾಟಿ ಕೆಲಸ ಸುಲಭ ಮಾಡಲು ಹೆಚ್ಚಿನ ಕಡೆಗಳಲ್ಲಿ ಡ್ರಮ್ ಸೀಡರ್ ಬಳಕೆ ಮಾಡಲಾಗುತ್ತಿದೆ. ಕೃಷಿ ಇಲಾಖೆ ಅಧಿಕಾರಿಗಳೂ ಈ ಯಂತ್ರದ ಬಳಕೆಗೆ ಶಿಫಾರಸ್ಸು ಮಾಡುತ್ತಿದ್ದಾರೆ.

ಡ್ರಮ್ ಸೀಡರ್ ಬಳಸಿದರೆ ಭತ್ತದ ನಾಟಿ ಕೆಲಸದ ಅಗತ್ಯ ಬೀಳುವುದಿಲ್ಲ. ನೀರಿನಲ್ಲಿ ಹಾಕಿದ ಮೊಳಕೆಯೊಡೆದ ಭತ್ತದ ಬೀಜವನ್ನು ಈ ಯಂತ್ರದ ಸಹಾಯದಿಂದ ನೇರವಾಗಿ ಗದ್ದೆಯಲ್ಲಿ ಬಿತ್ತನೆ ಮಾಡಬಹುದು. ಇದರಿಂದಾಗಿ ಗದ್ದೆಗಳಲ್ಲಿ ಸಾಂಪ್ರದಾಯಿಕ ಪದ್ಧತಿಯ ಕೈಯಿಂದ ನಾಟಿ ಮಾಡುವ ಕೆಲಸ ತಪ್ಪುತ್ತದೆ. ನಾಲ್ಕು ಸಣ್ಣ ಡ್ರಮ್‌ಗಳನ್ನು ಒಳಗೊಂಡ ಎರಡು ಚಕ್ರದ ಗಾಡಿಯಂತಹ ಯಂತ್ರದೊಳಗೆ ಮೊಳಕೆ ಬಂದ ಭತ್ತಗಳನ್ನು ಹಾಕಿ ಯಂತ್ರವನ್ನು ಗದ್ದೆಯಲ್ಲಿ ಕೈಯಿಂದ ಎಳೆಯುವ ಮೂಲಕ ಭತ್ತದ ಬೀಜವನ್ನು ಬಿತ್ತನೆ ಮಾಡಬಹುದಾಗಿದೆ.

ಯಾವ ತರಬೇತಿಯ ಅಗತ್ಯವಿಲ್ಲದೇ ಈ ಯಂತ್ರವನ್ನು ಒಬ್ಬರೇ ಅತಿ ಸುಲಭವಾಗಿ ಬಳಸಬಹುದು. ಒಮ್ಮೆಗೆ ೨೦ ಸೆಂಟಿ ಮೀಟರ್‌ಗೆ ಒಂದರಂತೆ ೮ ಸಾಲುಗಳಲ್ಲಿ ಬಿತ್ತನೆ ಮಾಡಲು ಈ ಯಂತ್ರದಿಂದ ಸಾಧ್ಯವಿದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಕೈಯಿಂದ ನಾಟಿ ಮಾಡುವುದಾದರೆ ಒಂದು ಎಕರೆಗೆ ೨೦ ಕಾರ್ಮಿಕರ ಅಗತ್ಯವಿದೆ. ಇವರ ಖರ್ಚು ಸುಮಾರು ೨೫-೩೦ ಸಾವಿರ ರೂ. ಬರುತ್ತದೆ. ಆದರೆ ಡ್ರಮ್ ಸೀಡರ್ ಮೂಲಕ ನಾಟಿ ಮಾಡಲು ಒಬ್ಬರೇ ಸಾಕು. ಇದಕ್ಕೆ ತಗುಲುವ ಖರ್ಚು ಸುಮಾರು ೫ ಸಾವಿರ ರೂ. ಮಾತ್ರ. ಈ ಯಂತ್ರ ಬಳಕೆಯಿಂದ ಹಣದ ಉಳಿತಾಯ ಮಾತ್ರವಲ್ಲದೇ ಸಮಯವೂ ಉಳಿಯುತ್ತದೆ. ಯಂತ್ರದ ಮೂಲಕ ನಾಟಿ ಮಾಡಲು ಎಕರೆಗೆ ಕೇವಲ ೧೫ ಕೆ.ಜಿ ಬಿತ್ತನೆ ಬೀಜ ಸಾಕು. ಕೈಯಲ್ಲಿ ನಾಟಿ ಮಾಡುವುದಾದರೆ ಎಕರೆಗೆ ೪೦-೪೫ ಕೆ.ಜಿ. ಬೀಜದ ಅಗತ್ಯವಿದೆ ಎನ್ನುತ್ತಾರೆ ಅನುಭವಿ ರೈತರು.

ಕೃಷಿ ಯಂತ್ರೋಪಕರಣಗಳು ದೊರೆಯುವ ಸ್ಥಳದಲ್ಲಿ ಅಥವಾ ಆನ್‌ಲೈನ್ ಮಾರುಕಟ್ಟೆಯಲ್ಲಿ ಡ್ರಮ್‌ಸೀಡರ್‌ಗಳು ದೊರೆಯುತ್ತದೆ. ಸುಮಾರು ೫-೬ ಸಾವಿರ ರೂ.ಬೆಲೆ ಇರುತ್ತದೆ. ಲೋಹ ಅಥವಾ ಫೈಬರ್‌ನಿಂದ ಈ ಯಂತ್ರ ತಯಾರಿಸಲಾಗುತ್ತದೆ. ಭತ್ತದ ಕೆಲಸಗಳಿಗೆ ಮಾತ್ರ ಇದನ್ನು ಬಳಸಬಹುದು. ಒಮ್ಮೆ ಖರೀದಿಸಿದರೆ ಸುಮಾರು ೨೦ ವ?ರ್ಗಳವರೆಗೂ ಬಾಳಿಕೆ ಬರುತ್ತದೆ. ಸದ್ಯ ಕೊಡಗಿನಲ್ಲಿ ಅಂದಾಜು ೧೦೦-೧೫೦ ಕೃಷಿಕರು ಈ ಯಂತ್ರದ ಮೂಲಕ ಕೃಷಿ ಮಾಡುತ್ತಿದ್ದು, ಉತ್ತಮ ಇಳುವರಿ ಪಡೆಯುತ್ತಿದ್ದಾರೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಡ್ರಮ್ ಸೀಡರ್ ಬಳಸುವವರು ಮೊದಲಿಗೆ ತಮ್ಮ ಗದ್ದೆಗಳನ್ನು ನಾಟಿಗಾಗಿ ಸಿದ್ಧ ಮಾಡಿಕೊಳ್ಳಬೇಕು. ಗದ್ದೆಯಲ್ಲಿ ಹೆಚ್ಚು ನೀರು ನಿಲ್ಲಬಾರದು. ಭತ್ತದ ಬೀಜಗಳನ್ನು ೨೪ ಗಂಟೆಗಳ ಕಾಲ ನೆನೆಸಿಡಬೇಕು. ಮೊಳಕೆಯೊಡೆದ ಬೀಜದ ಭತ್ತವನ್ನು ಡ್ರಮ್ ಸೀಡರ್‌ನ ನಾಲ್ಕು ಡ್ರಮ್‌ಗಳಿಗೆ ಮುಕ್ಕಾಲು ಭಾಗದ?್ಟು ಸಮನಾಗಿ ತುಂಬಿ, ಭತ್ತದ ಗದ್ದೆಯಲ್ಲಿ ಯಂತ್ರವನ್ನು ಎಳೆಯಬೇಕು. ಯಂತ್ರದ ಡ್ರಮ್‌ಗಳಲ್ಲಿರುವ ತೂತುಗಳ ಮೂಲಕ ಭತ್ತವು ಗದ್ದೆಗೆ ನಿಗದಿತ ಪ್ರಮಾಣದಲ್ಲಿ ಬಿದ್ದು ಬಿತ್ತನೆಯಾಗುತ್ತದೆ. ಯಂತ್ರದಲ್ಲಿರುವ ಚಕ್ರದ ಗುರುತಿನಲ್ಲಿಯೇ ಚಲಿಸಿದಾಗ ಇಡೀ ಗದ್ದೆಯಲ್ಲಿ ಒಂದೇ ಪ್ರಮಾಣದಲ್ಲಿ ನಾಟಿಯಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net