ಮಾದಕ ವಸ್ತು ದಂಧೆ ವಿರುದ್ಧ ಕಠಿಣ ಕ್ರಮ

Ganja
Published on

ಮಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ದಂಧೆ ವ್ಯಾಪಕ ಸದ್ದು ಮಾಡುತ್ತಿರುವ ಬೆನ್ನಲ್ಲೇ ಮಂಗಳೂರು ಕಮಿಷನರೆಟ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರಗ್ಸ್ ಕಾರ್ಯಾಚರಣೆ ಚುರುಕುಗೊಳಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಕಾಶ್ ಹಾಗೂ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀ ಪ್ರಸಾದ್ ಅವರೊಂದಿಗೆ ಶನಿವಾರ ವಿಡಿಯೊ ಕಾನ್ಫರೆನ್ಸ್ ನಡೆಸಿದ ಸಚಿವರು, ಡ್ರಗ್ಸ್ ಮಟ್ಟ ಹಾಕಲು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಯಾವುದೇ ಒತ್ತಡಗಳಿಗೆ ಮಣಿಯದೆ ಕಾರ್ಯಾಚರಣೆ ನಡೆಸುವಂತೆ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಪೊಲೀಸರು ಡ್ರಗ್ಸ್ ಪತ್ತೆ ವಿಚಾರದಲ್ಲಿ ಚುರುಕುಗೊಂಡಿದ್ದು, ಕಳೆದ ವಾರ 132 ಕಿ.ಗ್ರಾಂ ಗಾಂಜಾ ವಶಪಡಿಸಿಕೊಂಡು ಇಬ್ಬರನ್ನು ಮಂಗಳೂರಿನಲ್ಲಿ ಬಂಧಿಸಿದ್ದರು. ಹೊರ ರಾಜ್ಯಗಳಿಂದ ಡ್ರಗ್ಸ್ ಸಾಗಾಟ ಆಗುತ್ತಿರುವ ಮಾಹಿತಿ ಆಧರಿಸಿ ಪೊಲೀಸರು ನಿಗಾ ಇಟ್ಟಿದ್ದು, ಶೀಘ್ರದಲ್ಲೇ ದೊಡ್ಡ ಮಟ್ಟದ ದಂಧೆಕೋರರನ್ನು ಪತ್ತೆ ಮಾಡುವ ವಿಶ್ವಾಸದಲ್ಲಿದ್ದಾರೆ.

ಗ್ರಾಮಾಂತರ ಭಾಗದಲ್ಲೂ ಅಲರ್ಟ್: ಗಾಂಜಾ ಮತ್ತಿತರ ಮಾದಕ ಸೊತ್ತುಗಳು ಕೇವಲ ನಗರ ಪ್ರದೇಶದಲ್ಲಿ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶಕ್ಕೂ ತಲುಪಿದೆ. ಈ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಮಾದಕ ಸೊತ್ತುಗಳ ಪೂರೈಕೆ, ಬಳಕೆ ಆಗುವ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಪೊಲೀಸ್ ಅಧೀಕ್ಷಕರು ಗ್ರಾಮಾಂತರ ಠಾಣೆಗಳ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಾರ್ವಜನಿಕರು ಡ್ರಗ್ಸ್ ಬಗ್ಗೆ ಸುಳಿವು ಇದ್ದರೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಮಾಹಿತಿದಾರರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net