

ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡಿದ ಆರೋಪಿಯನ್ನು ನಗರ ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕಾಸರಗೋಡು ಚೆರ್ಕಳ ಕೊಲಾಚಿಯಾಡುಕ್ಕಂ ಹೌಸ್ ನಿವಾಸಿ ಅಬ್ದುಲ್ಲಾ ಸಿ. (39) ಬಂಧಿತ ಆರೋಪಿ. ಆರೋಪಿಯಿಂದ 7.50 ಲಕ್ಷ ರೂ. ಮೌಲ್ಯದ 150 ಗ್ರಾಂ ಎಂಡಿಎಂಎ, ಸಾಗಾಟಕ್ಕೆ ಬಳಸಿದ್ದ ಬ್ರೀಝಾ ಕಾರು, 1 ಮೊಬೈಲ್, 1260 ರೂ. ಸೇರಿದಂತೆ ಒಟ್ಟು 17,61,260 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡಿ ಸಾರ್ವಜನಿಕರಿಗೆ ಮಾರಾಟ ಮಾಡಲು ಬರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಎಸಿಪಿ ಪಿ.ಎ.ಹೆಗಡೆ ನೇತೃತ್ವದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ವಿರುದ್ಧ ಈ ಹಿಂದೆ ಆಂದ್ರಪ್ರದೇಶದ ವಿಶಾಖಪಟ್ಟಣದಲ್ಲಿ 45 ಕೆಜಿ ಗಾಂಜಾ ಸಾಗಾಟ ಪ್ರಕರಣ ದಾಖಲಾಗಿದೆ. ಕಾಸರಗೋಡು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಶ್ಯಾಮ ಸುಂದರ್ ಎಚ್.ಎಂ., ಪಿಎಸ್‌ಐ ಶರಣಪ್ಪ, ಎಎಸ್‌ಐ ಮೋಹನ್ ಕೆ.ವಿ. ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.