ಡ್ರಗ್ಸ್ ಮಾಫಿಯಾ ಕಡಿವಾಣಕ್ಕೆ ಆದ್ಯತೆ

davanagere igp ravi
Published on

ದಾವಣಗೆರೆ: ಪೂರ್ವವಲಯ ವ್ಯಾಪ್ತಿಯಲ್ಲಿ ಮಾದಕ ವಸ್ತು ಮಾಫಿಯಾ ಹಾಗೂ ಸೈಬರ್ ಅಪರಾಧಗಳ ನಿಯಂತ್ರಣಕ್ಕೆ ಮೊದಲ ಪ್ರಾಶಸ್ತ್ಯ ನೀಡುವುದಾಗಿ ನೂತನ ಪ್ರಭಾರ ಐಜಿಪಿ ಎಸ್. ರವಿ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಾದಕ ವಸ್ತುಗಳ ಜಾಲ ವಿಸ್ತರಣೆ ಯಾವ ಕಾರಣಕ್ಕೂ ತಾವು ಸಹಿಸುವುದಿಲ್ಲ. ಸೂಕ್ತ ಕ್ರಮ ವಹಿಸಲಾಗುವುದು ಎಂದರು.

ಬೆಂಗಳೂರು ಒಂದರಲ್ಲೇ ದಿನ ಒಂದಕ್ಕೆ ಸಿಇಎನ್ ಠಾಣೆಯಲ್ಲಿ 300 ರಷ್ಟು ಎಫ್‌ಐಆರ್ ದಾಖಲಾಗುತ್ತಿವೆ. ಅವುಗಳ ವಿಲೇಗೆ ಸಮಯ ಸಾಲುತ್ತಿಲ್ಲ. ಇತ್ತೀಚೆಗೆ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಇದರತ್ತ ಗಮನ ಹರಿಸಲಾಗುವುದು ಎಂದು ಹೇಳಿದರು.

ಪೂರ್ವವಲಯ ಶಾಂತಿಪ್ರಿಯವಾಗಿದೆ. ಇದೇ ರೀತಿ ನೋಡಿಕೊಂಡು ಬರಲಾಗುವುದು. ಸಂಚಾರ ನಿಯಮ ಪಾಲನೆ ವಿಚಾರದಲ್ಲಿ ನಾಗರಿಕರು ಸಹಕಾರ ನೀಡಬೇಕು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿದರೆ ಅಪಘಾತಗಳು ತಗ್ಗಲಿವೆ ಎಂದರು.

ಪ್ರಭಾರ ಐಜಿಪಿ ಎಸ್.ರವಿ ಅಧೀಕಾರ ಸ್ವೀಕಾರ:
ನೂತನ ಪ್ರಭಾರ ಐಜಿಪಿ ಎಸ್.ರವಿ ಭಾನುವಾರ ಸಂಜೆ ಎಸ್ಪಿ ಹನುಮಂತರಾಯ ಅವರಿಂದ ಅಧಿಕಾರ ವಹಿಸಿಕೊಂಡರು. 1998ರ ಐಪಿಎಸ್ ಬ್ಯಾಚ್‌ನವರಾದ ಎಸ್. ರವಿ, ಕಲ್ಬುರ್ಗಿಯಲ್ಲಿ ಪ್ರೊಬೆಷನರಿ ಸೇವೆ ಪೂರ್ಣಗೊಳಿಸಿ ಯಾದಗಿರಿಯಲ್ಲಿ ಎಎಸ್‌ಪಿಯಾಗಿ ಕಾರ್ಯ ಆರಂಭಿಸಿದ್ದರು.

ಕೊಪ್ಪಳ, ಕಾರವಾರ, ಬೀದರ್ ಜಿಲ್ಲೆಗಳಲ್ಲಿ ಎಸ್ಪಿಯಾಗಿ, ಬೆಂಗಳೂರು ದಕ್ಷಿಣದ ಡಿಸಿಪಿಯಾಗಿ, ಕಲ್ಬುರ್ಗಿಯಲ್ಲಿ ಪೊಲೀಸ್ ತರಬೇತಿ ಕೇಂದ್ರದ ಅಧಿಕಾರಿಯಾಗಿ, ಬೆಂಗಳೂರು ನಗರದ ಜಂಟಿ ಪೊಲೀಸ್ ಆಯುಕ್ತರಾಗಿ, ಬೆಳಗಾಂನ ಪೊಲೀಸ್ ಕಮೀಷನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಅಧಿಕಾರಿ ಹುದ್ದೆ ಜತೆಗೆ ಹೆಚ್ಚುವರಿ ಐಜಿಪಿಯಾಗಿ ಕಾರ್ಯಭಾರ ವಹಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net