

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳು. ರಾಜ್ಯದಲ್ಲಿ ಅತೀ ಹೆಚ್ಚು ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳನ್ನು ಹೊಂದಿವೆ. ಹೊರ ರಾಜ್ಯ, ಹೊರ ದೇಶಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ ಡ್ರಗ್ಸ್ ಮಾಫಿಯಾ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳನ್ನೇ ಗುರಿಯನ್ನಾಗಿಸಿ ಕಾರ್ಯಾಚರಿಸುತ್ತಿರುವುದು ಪೊಲೀಸ್ ತನಿಖೆಯಿಂದ ಸಾಬೀತಾಗಿದೆ.
ಉಡುಪಿ ಹಾಗೂ ಮಂಗಳೂರು ನಗರದಲ್ಲಿ ವಾರ್ಷಿಕವಾಗಿ 150ಕ್ಕಿಂತಲೂ ಅಧಿಕ ಡ್ರಗ್ಸ್ ಪ್ರಕರಣಗಳು ಪತ್ತೆಯಾಗುತ್ತಿವೆ. ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಸಣ್ಣ ಸಣ್ಣ ಪ್ಯಾಕೇಟ್‌ಗಳನ್ನಾಗಿಸಿ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದರಲ್ಲಿ ಗಾಂಜಾ, ಎಲ್ಎಸ್‌ಡಿ(Lysergic Acid diethylamide), ಎಂಡಿಎಂಎ(Methylene Dioxy Meth Amphetami) ಮತ್ತು ಎಂಡಿಎಂ(Methylene Dioxy Methamthetami) ಸೇರಿವೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಶನಿವಾರ ಎಲ್ಲ ಪೊಲೀಸ್ ಆಯುಕ್ತರು, ಅಧೀಕ್ಷರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ್ದು, ಡ್ರಗ್ಸ್ ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಚುರುಕಾಗಿದ್ದು, ಡ್ರಗ್ಸ್ ಕಿಂಗ್ ಪಿನ್‌ಗಳ ಮೇಲೆ ಕಣ್ಣಿಟ್ಟು ಶೋಧ ನಡೆಸುತ್ತಿದ್ದಾರೆ. ಮಹತ್ತರ ಸುಳಿವು ಸಿಕ್ಕಿದ್ದು, ವಾರದೊಳಗೆ ದೊಡ್ಡ ಮಟ್ಟದ ಡ್ರಗ್ಸ್ ಜಾಲ ಪೊಲೀಸ್ ಬಲೆಗೆ ಬೀಳುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಸ್ನೇಹ ದುರ್ಬಳಕೆ: ಡ್ರಗ್ಸ್ ಮಾರಾಟಗಾರರು ವಿದ್ಯಾರ್ಥಿಗಳ ಸ್ನೇಹ ಸಂಪಾದಿಸಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳ ಮೂಲಕವೇ ಮಾರಾಟಕ್ಕೆ ದಾರಿ ಕಂಡುಕೊಂಡಿದ್ದಾರೆ. ಕಳೆದ ವರ್ಷ ನಗರದ ಇಂಜಿನಿಯರಿಂಗ್ ಕಾಲೇಜಿನ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿತ್ತು.
ಹೊರ ರಾಜ್ಯ, ದೇಶದ ವಿದ್ಯಾರ್ಥಿಗಳು ಕಾಲೇಜು ಹಾಸ್ಟೆಲ್, ಪೇಯಿಂಗ್ ಗೆಸ್ಟ್, ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಾರೆ. ದೂರದಲ್ಲಿರುವ ಪಾಲಕರಿಗೆ ತಮ್ಮ ಮಕ್ಕಳ ಮೇಲೆ ನಿಗಾ ಇಡಲು ಸಾಧ್ಯವಾಗುವುದಿಲ್ಲ. ವಿಷಯ ಗಮನಕ್ಕೆ ಬರುವಾಗ ಕಾಲ ಮಿಂಚಿರುತ್ತದೆ. ಡ್ರಗ್ಸ್ ಚಟಕ್ಕೆ ಬಿದ್ದು ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯ ಕಳೆದುಕೊಳ್ಳುತ್ತಿರುವುದು ಆತಂಕ ಉಂಟು ಮಾಡಿದೆ.
ಕೇರಳ-ಗೋವಾದಿಂದ ಸಾಗಾಟ: ಕರಾವಳಿ ಜಿಲ್ಲೆಗಳಿಗೆ ಕೇರಳ ಹಾಗೂ ಗೋವಾದಿಂದ ಗಾಂಜಾ ಮತ್ತಿತರ ಡ್ರಗ್ಸ್ ಸಾಗಾಟವಾಗುತ್ತಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ರೈಲ್ವೆ ಹಾಗೂ ವಾಹನಗಳ ಮೂಲಕ ಸಾಗಾಟ ನಡೆಯುತ್ತಿದ್ದು, ಅದನ್ನು ಸಣ್ಣ ವ್ಯಾಪಾರಿಗಳ ಮೂಲಕ ಮಾರಾಟ ಮಾಡಲಾಗುತ್ತಿದೆ. ಮಂಗಳೂರಿನಲ್ಲಿ ಪತ್ತೆಯಾದ ಡ್ರಗ್ಸ್ ಸಾಗಾಟ ಪ್ರಕರಣಗಳಲ್ಲಿ ಶೇ.70ರಷ್ಟು ಮಂದಿ ಕೇರಳದವರು ಪತ್ತೆಯಾಗಿದ್ದಾರೆ.
ವೃತ್ತಿಪರ ವ್ಯಾಪಾರಿಗಳು: ಗಾಂಜಾ ಮತ್ತಿತರ ಡ್ರಗ್ಸ್ ಮಾರಾಟವನ್ನೇ ವೃತ್ತಿಯನ್ನಾಗಿಸಿಕೊಂಡವರು ಕರಾವಳಿಯಲ್ಲಿದ್ಧಾರೆ. ಮಂಗಳೂರು ಹಳೇ ಬಂದರ್ ನಿವಾಸಿ ಅಬ್ದುಲ್ ರಹೀಂ ಯಾನೆ ಕಂಡಿ ರಹೀಂ ವಿರುದ್ಧ 10ಕ್ಕಿಂತಲೂ ಅಧಿಕ ಗಾಂಜಾ ಮಾರಾಟಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಗೂಂಡಾ ಕಾಯ್ದೆಯನ್ನು ಹೇರಲಾಗಿತ್ತು. ಬಂಧನಕ್ಕೊಳಗಾದರೆ ಜಾಮೀನು ಪಡೆದು ಹೊರ ಬಂದ ಬಳಿಕ ಮತ್ತೆ ಅದೇ ಕೃತ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾನೆ. ಹಲವು ಮಂದಿ ಇದನ್ನೇ ವೃತ್ತಿಯನ್ನಾಗಿಸಿಕೊಂಡಿರುವುದು ಪೊಲೀಸರಿಗೂ ದೊಡ್ಡ ಸವಾಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರಗ್ಸ್ ಮಟ್ಟ ಹಾಕಲು ಪೊಲೀಸ್ ಇಲಾಖೆ ದಿಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ. ಗ್ರಾಮಾಂತರ ಭಾಗಗಳಲ್ಲೂ ಗಂಭೀರವಾಗಿ ಪರಿಗಣಿಸಿ, ಈ ಹಿಂದೆ ಪ್ರಕರಣದಲ್ಲಿ ಭಾಗಿಯಾದವರ ಪರೇಡ್ ನಡೆಸಲಾಗುತ್ತಿದೆ. ಅಂತಹ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ.
ಬಿ.ಎಂ.ಲಕ್ಷ್ಮೀ ಪ್ರಸಾದ್, ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ