

ಬೆಂಗಳೂರು: ಬಾಂಗ್ಲಾ ದೇಶದ ಗಡಿಭಾಗದಿಂದ ಡ್ರಗ್ಸ್ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಕ್ಯಾಬ್ ಚಾಲಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಸ್ಸಾಂ ಮೂಲದ ಶಾಕೀರ್ ಹುಸೇನ್ ಚೌದರಿ (34) ಬಂಧಿತ. ಆರೋಪಿಯಿಂದ 28 ಲಕ್ಷ ರೂ. ಮೌಲ್ಯದ 165 ಗ್ರಾಂ ಎಂಡಿಎಂಎ ಮಾತ್ರೆ, 71 ಗ್ರಾಂ ಹೆರಾಯಿನ್ ಪೌಡರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.
ಐದು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಶಾಕೀರ್ ಹುಸೇನ್, ಕ್ಯಾಬ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ದುಶ್ಚಟಗಳಿಗೆ ದಾಸನಾಗಿದ್ದು, ಹೆಚ್ಚಿನ ಸಂಪಾದನೆ ಮಾಡಲು ಯೋಚಿಸಿದ್ದ. ತನಗೆ ಪರಿಚಯವಿದ್ದ ಡ್ರಗ್ ಪೆಡ್ಲರ್‌ಗಳನ್ನು ಸಂಪರ್ಕಿಸಿ ದಂಧೆಗೆ ಇಳಿದಿದ್ದ. ಕಾರು ತೆಗೆದುಕೊಂಡು ಬಾಂಗ್ಲಾ ದೇಶದ ಗಡಿಭಾಗಕ್ಕೆ ಹೋಗಿ, ಬೊಂಬೆ ಹಾಗೂ ಬಟ್ಟೆ ಸೋಪುಗಳ ಬಾಕ್ಸ್‌ನಲ್ಲಿ ಮಾದಕ ದ್ರವ್ಯ ತರುತ್ತಿದ್ದ. ತಪಾಸಣೆ ವೇಳೆ ಅನುಮಾನ ಬಾರದಿರಲು ಕಾರಿನಲ್ಲಿ ಪತ್ನಿ ಹಾಗೂ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ.
ಗುರುವಾರ (ಡಿ.3) ಸಂಜೆ 4 ಗಂಟೆಯಲ್ಲಿ ಹಳೇ ಮದ್ರಾಸ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಗಸ್ತಿನಲ್ಲಿದ್ದ ಪೊಲೀಸರು ಕಾರು ತಡೆದು ದಾಖಲೆ ಕೇಳಿ ಪರಿಶೀಲಿಸಿದ್ದರು. ಆತನ ನಡೆಯ ಬಗ್ಗೆ ಆನುಮಾನ ಮೂಡಿತ್ತು. ಬೊಂಬೆಗಳನ್ನು ಪರಿಶೀಲಿಸಿದಾಗ ಎಂಡಿಎಂಎ ಮಾತ್ರೆಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.