

ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ನೈಜೀರಿಯಾ ಮೂಲದ ಮತ್ತೊಬ್ಬ ಪೆಡ್ಲರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಓಸೀ (34) ಬಂಧಿತ. ಡ್ರಗ್ಸ್ ಕೇಸಿನಲ್ಲಿ ಬಂಧನಕ್ಕೆ ಒಳಗಾಗಿರುವ ಪೆಡ್ಲರ್ ಸೈಮನ್ ಸಹಚರನಾಗಿದ್ದಾನೆ. ಈ ಪ್ರಕರಣದಲ್ಲಿ ಬಂಧಿತನಾಗುತ್ತಿರುವ ನಾಲ್ಕನೇ ಪೆಡ್ಲರ್ ಈತ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಪೇಜ್ -3 ಪಾರ್ಟಿಗಳಿಗೆ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ. ಪ್ರಕರಣ ಬೆಳಕಿಗೆ ಬರುತ್ತಿದಂತೆ ಆರೋಪಿ ತಲೆಮರೆಸಿಕೊಂಡಿದ್ದ. ಸೈಮನ್ ಮತ್ತು ಲೂಪ್ ಪೆಪ್ಪರ್ ಬಂಧನದಿಂದ ಆರೋಪಿಗಳ ಸುಳಿವು ಲಭ್ಯ ವಾಗಿತ್ತು. ಖಚಿತ ಮಾಹಿತಿ ಮೇರೆಗೆ ಗುರುವಾರ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಮಾದಕ ದ್ರವ್ಯ ಜಾಲದ ನಂಟು ಮತ್ತು ಪೇಜ್ 3 ಪಾರ್ಟಿ ಗಳಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಆರೋಪದಲ್ಲಿ 14 ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಲಾಗಿದೆ. ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಪೇಜ್ 3 ಪಾರ್ಟಿ ಆಯೋಜಕರಾದ ವಿರೇನ್ ಖನ್ನಾ, ರಾಹುಲ್ ತೋನ್ಸೆ, ಆರ್ ಟಿಒ ನೌಕರ ರವಿಶಂಕರ್ ಸೇರಿದಂತೆ ಇತರರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.