ಔಷಧ ವ್ಯಾಪಾರಸ್ಥರ ಸಂಘದ ಸುವರ್ಣ ಮಹೋತ್ಸವ

IMG_20231210_202834_617-1.jpg
Published on

ಹುಬ್ಬಳ್ಳಿ: ನಮ್ಮ ಕಂಪನಿಯು ಚಿಕ್ಕದಿದ್ದಾಗಿಂದಲೂ ಔಷಧ ವ್ಯಾಪಾರಸ್ಥರು ಬೆನ್ನು ತಟ್ಟುತ್ತ ಬಂದಿದ್ದೀರಿ, ಹಾಗಾಗಿ ನಿಮ್ಮ ಸಂಘ ಕೂಡ ನಮ್ಮ ಸಂಸ್ಥೆಯ ಆಧಾರ ಸ್ತಂಭ ಇದ್ದಂತೆ ಎಂದು ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದರು.

ಇಲ್ಲಿಯ ನವೀನ ಹೋಟೆಲ್ನಲ್ಲಿ ಭಾನುವಾರ ಧಾರವಾಡ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಏರ್ಪಡಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.

ಈಗ ಪ್ರತಿಯೊಂದು ಕ್ಷೇತ್ರದಲ್ಲಿ ಸ್ಪರ್ಧೆ ಇದೆ, ವ್ಯಾಪಾರದಲ್ಲಿ ಮಾಜಿರ್ನ್ ಕಡಿಮೆ ಆಗಿರಬಹುದು. ಇದರಿಂದ ವಿಚಲಿತರಾಗಬಾರದು. ಎಲ್ಲದರಲ್ಲೂ ಹೊಸತನ ಹುಡುಕಬೇಕು. ನವೀನ ಪ್ರಯೋಗಗಳನ್ನು ಮಾಡಬೇಕು. ಅಂದಾಗ ಯಶಸ್ಸು ಸಿಗಲು ಸಾಧ್ಯ ಎಂದರು.

ಸದಾ ನಾವು ನಮ್ಮ ಗ್ರಾಹಕರೊಂದಿಗೆ ಇರಬೇಕು. ಯಾವುದೇ ಕಾರಣಕ್ಕೂ ಸೇವೆಯಲ್ಲಿ ವ್ಯತ್ಯಾಸ ಆಗಬಾರದು. ಪ್ರಾಮಾಣಿಕವಾಗಿ ವ್ಯವಹಾರ ಮಾಡಿದರೆ ಬ್ಯಾಂಕ್ಗಳು ಸಹ ತಾವಾಗಿಯೇ ಮುಂದೆ ಬಂದು ಸಾಲ ಕೊಡುತ್ತವೆ ಎಂದ ಸಂಕೇಶ್ವರ ಅವರು, ತಾವು ಬೆಳೆದು ಬಂದ ಬಗೆಯನ್ನು ವಿವರಿಸಿದರು.

ನೀವು ಸಹ ನಿಮ್ಮ ಕ್ಷೇತ್ರದಲ್ಲಿ ಬೆಳೆಯಬೇಕಾದರೆ ಎದುರಾಳಿಗಳನ್ನು ಕನಿಷ್ಠವಾಗಿ ಕಾಣಬಾರದು. ಸ್ಪರ್ಧೆ ಇದ್ದರೆ ಮಾತ್ರ ಬೆಳವಣಿಗೆ ಸಾಧ್ಯ ಎಂದರು.

ಸಂಘದ ಅಧ್ಯಕ್ಷ ರವೀಂದ್ರ ಭೂಸನೂರ ಮಾತನಾಡಿ, ಔಷಧ ವ್ಯಾಪಾರಸ್ಥರ ಸಂದ 25ನೇ ವಾಷಿರ್ಕೋತ್ಸವಕ್ಕೂ ವಿಜಯ ಸಂಕೇಶ್ವರ ಅವರು ಬಂದಿದ್ದರು. ಸುವರ್ಣ ಮಹೋತ್ಸವಕ್ಕೂ ಬಂದಿರುವುದು ನಮ್ಮ ಸಂತೋಷ ಇಮ್ಮಡಿಗೊಳಿಸಿದೆ. ಅವರೊಂದಿಗಿನ ನಮ್ಮದು ಅವಿನಾಭಾವ ಸಂಬಂಧವಿದೆ. ಾರ್ಮಾ ಉದ್ಯಮ ಬೆಳೆಯಲು ವಿಆರ್ ಎಲ್ ಸಂಸ್ಥೆಯೂ ಕಾರಣ ಎಂದು ಹೇಳಿದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೇಘಾ ಜೈನ್, ನೇಹಾ ಸುರಿಂದರ, ಜಯೇಶ, ಮಹ್ಮದ ಜುನೇದ, ಶ್ರೇಯಾ ತೆಗ್ಗಿನಮನಿ, ವೇದಾ, ಅನಘಾ, ಕರುಣಾ ಅಗಡಿ ಸೇರಿದಂತೆ ಅನೇಕ ವಿದ್ಯಾಥಿರ್ಗಳನ್ನು ಸನ್ಮಾನಿಸಲಾಯಿತು.

ಶ್ರೀಮತಿ ಲಲಿತಾ ವಿಜಯ ಸಂಕೇಶ್ವರ, ಶಾರದಾ ಭೂಸನೂರ, ಔಷಧ ನಿಯಂತ್ರಕ ಬಿ.ಟಿ. ಖಾನಾಪುರೆ, ಅಪರ ಔಷಧ ನಿಯಂತ್ರಕ ಅಮರೇಶ ತುಂಬಗಿ, ಸಂಘದ ಉಪಾಧ್ಯಕ್ಷ ಆನಂದ ಶಾನಭಾಗ, ಗೌರವ ಕಾರ್ಯದರ್ಶಿ ವಿರುಪಾಕ್ಷಪ್ಪ ಕಪ್ಪರಶೆಟ್ಟರ, ಖಜಾಂಚಿ ವಿನೋದ ಯಳಮಲಿ, ಜಂಟಿ ಕಾರ್ಯದರ್ಶಿ ಭಾಸ್ಕರ ಸೋಲಾಪೂಕರ, ಸದಸ್ಯರು ಉಪಸ್ಥಿತರಿದ್ದರು.
ವಿವೇಕ ಹಾಗೂ ರವಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net