ಮಾದಕ ಜಾಲ ಭೇದಿಸಲು ಬಿಗಿ ನಿಲುವು

17mdk01
Published on

ಮಡಿಕೇರಿ:

ಕೊಡಗಿನಲ್ಲಿ ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಪೊಲೀಸರು ಮುಗಿಬಿದ್ದಿದ್ದಾರೆ. ಮಾದಕ ವಸ್ತುಗಳ ಸೇವನೆ ಚಟಕ್ಕೆ ಬಿದ್ದವರಿಂದ ಇದನ್ನು ಪೂರೈಕೆ ಮಾಡುತ್ತಿರುವವರ ತನಕ ಎಲ್ಲರನ್ನೂ ಹೆಡೆಮುರಿ ಕಟ್ಟಲಾಗುತ್ತಿದೆ. ಮಾದಕ ವಸ್ತುಗಳ ಮಾರಾಟ ಜಾಲದ ವಿರುದ್ಧ ಕಳೆದ ಮೂರು ತಿಂಗಳಿನಿಂದ ಈಚೆಗೆ ಪೊಲೀಸ್ ಇಲಾಖೆ ನಡೆಸುತ್ತಿರುವ ಕಾರ್ಯಾಚರಣೆಯ ಬಿಸಿಗೆ ಅಕ್ರಮ ದಂಧೆಕೋರರಲ್ಲಿ ನಡುಕ ಹುಟ್ಟಿಕೊಂಡಿದೆ. ಕೆ.ಜಿ.ಗಟ್ಟಲೆ ಗಾಂಜಾ ಸೇರಿದಂತೆ ವಿವಿಧ ರೀತಿಯ ಮಾದಕ ಪದಾರ್ಥಗಳನ್ನು ವಶಪಡಿಸಿಕೊಳ್ಳುತ್ತಿರುವ ಪೊಲೀಸರು, ಇದರ ಹಿಂದೆ ಇರುವ ವ್ಯಕ್ತಿಗಳನ್ನು ಜೈಲಿಗೆ ಕಳಿಸುವ ಕೆಲಸ ಮಾಡುತ್ತಿದ್ದಾರೆ. ವಾಹನ, ಮೊಬೈಲ್ ಹಾಗೂ ದಂಧೆಗೆ ಬಳಸುತ್ತಿದ್ದ ಇತರ ವಸ್ತುಗಳೂ ಪೊಲೀಸರ ವಶವಾಗಿದೆ.

ವಿಶ್ವವಿದ್ಯಾಲಯ, ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್, ಐಟಿಐ, ಪದವಿ, ಪದವಿಪೂರ್ವ ಕಾಲೇಜು…ಹೀಗೆ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ಕೊಡಗಿನಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಸಕ್ರಿಯವಾಗಿದ್ದು, ಯುವಕರನ್ನು ಇದರತ್ತ ಸೆಳೆಯುತ್ತಿರುವ ಸಂಗತಿ ಗುಟ್ಟಾಗಿಯೇನೂ ಇರಲಿಲ್ಲ. ಈ ಜಾಲವನ್ನು ಮಟ್ಟ ಹಾಕುವಂತೆ ಪೋಷಕರು ಮತ್ತು ಸಾರ್ವಜನಿಕರು ಹಲವು ರೀತಿಯಲ್ಲಿ ಒತ್ತಡ ಹೇರುತ್ತಾ ಬಂದಿದ್ದರೂ ಪ್ರಯೋಜನ ಆಗಿರಲಿಲ್ಲ. ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳು ವರ್ಷಕ್ಕೊಮ್ಮೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಸುಮ್ಮನಾಗಿಬಿಡುತ್ತಿದ್ದರು. ಜಾಲದ ತಳಕ್ಕೆ ಇಳಿಯುವ ಕೆಲಸ ಆಗಿರಲಿಲ್ಲ.

ಕೊಡಗು ಪ್ರವಾಸಿ ತಾಣವೂ ಆಗಿರುವುದರಿಂದ ಕೆಲವು ರೆಸಾರ್ಟ್, ಹೋಮ್‌ಸ್ಟೇಗಳಲ್ಲೂ ಈ ದಂಧೆ ಸಕ್ರಿಯವಾಗಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದವು. ಈ ಹಿಂದೆ ಕೆಲವು ಕಡೆ ದಾಳಿಯೂ ನಡೆದಿತ್ತು. ಆದರೆ ನಿರೀಕ್ಷಿತ ಪ್ರಯೋಜನ ಆಗಿರಲಿಲ್ಲ. ದಂಧೆಕೋರರು ಚಿವುಟಿಸಿದಷ್ಟೂ ಹೆಚ್ಚು ಚಿಗುರಿಕೊಂಡು ಸಮಾಜಕ್ಕೆ ತಲೆನೋವಾಗಿ ಮಾರ್ಪಟ್ಟಿದ್ದರು.

ಇದೀಗ ಜಿಲ್ಲಾ ಎಸ್.ಪಿ. ಕೆ. ರಾಮರಾಜನ್ ನೇತೃತ್ವದಲ್ಲಿ ಜಿಲ್ಲೆಯ ಸಂಪೂರ್ಣ ಪೊಲೀಸ್ ಇಲಾಖೆ ಮಾದಕ ವಸ್ತುಗಳ ಮಾರಾಟ ಜಾಲದ ವಿರುದ್ಧ ಠೊಂಕ ಕಟ್ಟಿ ನಿಂತಿದೆ. ಚಿಕ್ಕ ಸುಳಿವು ಸಿಕ್ಕಿದರೂ ಆರೋಪಿಗಳ ಬೆನ್ನುಬಿದ್ದು, ಜಾಲವನ್ನು ಬೇರು ಸಮೇತ ಕಿತ್ತುಹಾಕುವಲ್ಲಿ ಶಕ್ತಿ ಮೀರಿ ಶ್ರಮಿಸುತ್ತಿದೆ. ದುಶ್ಚಟಗಳ ದಾಸರಾದವರನ್ನೂ ಬಿಡದೆ ಬೆಂಡೆತ್ತಲಾಗುತ್ತಿದೆ.

ಕೊಡಗಿನ ಪೊಲೀಸರ ಹೆಜ್ಜೆ ಮೆಚ್ಚುವಂಥದ್ದು. ಸಾರ್ವಜನಿಕರು ಅವರ ಜೊತೆ ಕೈ ಜೋಡಿಸಿದರೆ ಈ ಜಾಲವನ್ನು ಸಂಪೂರ್ಣವಾಗಿ ಮಟ್ಟ ಹಾಕಬಹುದು. ಈ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಸಾರ್ವಜನಿಕರಿಗೆ ಮಾಹಿತಿ ಸಿಕ್ಕ ತಕ್ಷಣ ಪೊಲೀಸರಿಗೆ ತಿಳಿಸಬೇಕು.. ಸಾರ್ವಜನಿಕರಿಗೂ ಜವಾಬ್ದಾರಿ ಇದೆ ಎನ್ನುವುದನ್ನು ಅರಿತಿರಬೇಕು..
ಮೋಹನ್ ಕುಮಾರ್, ಉಪನ್ಯಾಸಕ, ಭಾರತಿ ಪ್ರಥಮ ದರ್ಜೆ ಕಾಲೇಜು, ಶನಿವಾರಸಂತೆ

ಕೆಟ್ಟದ್ದನ್ನು ಬೇರು ಸಮೇತ ಕಿತ್ತು ಹಾಕಬೇಕೆಂದಿದ್ದರೆ ಸಾರ್ವಜನಿಕರ ಸಹಕಾರ ಅತಿ ಅಗತ್ಯವಾಗಿ ಬೇಕೇ ಬೇಕು. ಬಹುತೇಕ ಜನರು ’ನಮಗೇಕೆ’ ಎಂದು ಆಲೋಚಿಸುತ್ತಾರೆ. ಇದು ಸಾರ್ವಜನಿಕವಾಗಿ ಆರೋಗ್ಯದ ಮೇಲೆ ಹಾಗೂ ಸಾಮಾಜಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಬಲ್ಲುದು. ಅಕ್ಕಪಕ್ಕದಲ್ಲಿಯೇ ಮಾದಕ ವ್ಯಸನಿಗಳಿದ್ದಾಗ್ಯೂ, ಮಾದಕ ವಸ್ತುಗಳ ವ್ಯವಹಾರ ಮಾರಾಟ ನಡೆಯುತ್ತಿದ್ದಾಗ್ಯೂ, ನೋಡಿಯೂ ನೋಡದಂತೆ ಸುಮ್ಮನಾಗಿ ಬಿಡುವ ಬದಲು ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ ಪೊಲೀಸ್ ಅಥವಾ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವುದು ನಮ್ಮ ಕರ್ತವ್ಯ.
ಡಿ. ಸುಜಲಾದೇವಿ, ಪ್ರಾಂಶುಪಾಲರು. ಸುಪ್ರಜ ಗುರುಕುಲ, ಶನಿವಾರಸಂತೆ

ದೇಶಕ್ಕೆ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಮಾರಕ. ಮಾದಕ ವಸ್ತು ಸೇವನೆ ಯುವಜನರ ದಿಕ್ಕು ತಪ್ಪಿಸುತ್ತಿದೆ. ಪೋಷಕರು ಮಕ್ಕಳಿಗೆ ಇದರ ಬಗ್ಗೆ ತಿಳಿಹೇಳಬೇಕು. ಮಕ್ಕಳ ಮೇಲೆ ಗಮನ ಇರಿಸಬೇಕು. ಎಲ್ಲಿಯಾದರೂ ಮಾದಕವಸ್ತು ಸರಬರಾಜು ಅಥವಾ ಬಳಕೆ ಕಂಡುಬಂದಲ್ಲಿ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು.
ಡಾ. ಅರ್ಚನಾ ಸುಮನ್, ವೈದ್ಯಾಧಿಕಾರಿ, ಗೋಣಿಕೊಪ್ಪಲು

ಮಾದಕ ವಸ್ತುಗಳನ್ನು ಸೇವಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಯುವ ಜನಾಂಗಕ್ಕೆ ಸೂಕ್ತ ಮಾಹಿತಿ ಒದಗಿಸಬೇಕು. ಮಾದಕ ವಸ್ತು ದೊರೆಯುವ ಜಾಗ ತಿಳಿದಿದ್ದರೆ ಪೊಲೀಸರಿಗೆ ತಿಳಿಸಬೇಕು. ನಮ್ಮ ನಮ್ಮ ಮನೆಗಳಿಂದಲೇ ಯುವಕ ಯುವತಿಯರಿಗೆ ಜಾಗೃತಿ ಮೂಡಿಸಿದರೆ ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸಬಹುದು. ಅಂತಹ ದುಶ್ಚಟಗಳನ್ನು ಹೊಂದಿರುವವರಿಂದ ದೂರ ಇರುವಂತೆ ನೋಡಿಕೊಳ್ಳಬೇಕು.
ದಿವ್ಯ ಮುತ್ತಮ್ಮ, ಗೃಹಿಣಿ, ಕುಶಾಲನಗರ

ಮಾದಕ ವಸ್ತು ವಿದ್ಯಾರ್ಥಿಗಳನ್ನ ತನ್ನ ತೆಕ್ಕೆಯೊಳಗೆ ಸೇರಿಸಿಕೊಂಡಿದೆ. ಒಂದು ಕಡೆ ಅವರಿಗೆ ಮಾಹಿತಿ ಕೊರತೆ ಮತ್ತು ಯವ್ವನದ ಉತ್ಸಾಹ ದಾರಿ ತಪ್ಪಿಸುತ್ತಿದೆ. ಪೋಷಕರು ತಮ್ಮ ಮಕ್ಕಳ ಮೇಲೆ ಅತಿಯಾದ ನಂಬಿಕೆ ಇಟ್ಟುಕೊಳ್ಳದೆ ಅವರ ಮೇಲೆ ನಿಗಾ ವಹಿಸಬೇಕು. ಯಾವುದೇ ತರಹದಲ್ಲಿ ವ್ಯತ್ಯಾಸ ಕಂಡುಬಂದರೆ ಪರಿಶೀಲನೆ ನಡೆಸಿ ಬುದ್ಧಿವಾದ ಹೇಳಬೇಕು. ಮಾದಕ ವಸ್ತುಗಳ ಸರಬರಾಜು ಮಾಡುವವರ ಸುಳಿವು ಸಿಕ್ಕಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು.
ಮಂದೆಯಂಡ ವನಿತ್ ಕುಮಾರ್, ಎನ್.ಎಸ್.ಎಸ್. ನೋಡಲ್ ಅಧಿಕಾರಿ, ಕೊಡಗು

ಶಿಸ್ತಿಗೆ ಹೆಸರಾದ ನಮ್ಮ ಕೊಡಗಿನಲ್ಲಿ ಮಾದಕ ವಸ್ತುಗಳಿಗೆ ನಮ್ಮ ಜನರು ಅದರಲ್ಲೂ ಯುವ ಜನತೆ ಬಲಿಯಾಗುತ್ತಿರುವುದು ದುರದೃಷ್ಟಕರ. ಮಕ್ಕಳು ಮನೆ ಹೊರಗೆ ಹೋಗಿ ಸ್ನೇಹಿತರು ಅವರಿವರ ಜೊತೆ ಸೇರಿ ಈ ಪದಾರ್ಥಗಳ ದಾಸರಾಗುತ್ತಿದ್ದಾರೆ. ಇವರು ಸೇರುವ ಜಾಗಗಳ ಬಗ್ಗೆ ಎಲ್ಲರಿಗೂ ಮಾಹಿತಿಯಿರುತ್ತದೆ. ಹಾಗಾಗಿ ಸಾರ್ವಜನಿಕರು ಇಂತಹ ವಸ್ತುಗಳನ್ನು ಬಳಸುವವರು ಹಾಗೂ ಮಾರುವವರ ಬಗ್ಗೆ ಪೊಲೀಸರಿಗೆ ಯಾವುದೇ ಹಿಂಜರಿಕೆಯಿಲ್ಲದೆ ಮಾಹಿತಿ ನೀಡುವುದರ ಮೂಲಕ ಡ್ರಗ್ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು.
ಶಶಿಕುಮಾರ್ ಹೊಸಮನೆ, ಸೋಮವಾರಪೇಟೆ

ಕೊಡಗಿನಲ್ಲಿ ಮಾದಕ ವಸ್ತುಗಳ ವಿರುದ್ಧ ಕೊಡಗಿನ ಪೊಲೀಸ್ ವ್ಯವಸ್ಥೆ ಮುಗಿಬಿದ್ದಿರುವುದು ಸಮಾಜದ ಹಿತದೃಷ್ಟಿಯಿಂದ ಬಹಳ ಒಳ್ಳೆಯ ಬೆಳವಣಿಗೆ. ಈ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಈ ಪಿಡುಗಿನ ವಿರುದ್ಧ ಕೊಡಗಿನಾದ್ಯಂತ ಸಾಮಾಜಿಕ ಅಭಿಯಾನ ನಡೆಸುವ ಮೂಲಕ ಪೂರ್ಣ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡಬೇಕು. ಮಾದಕ ವಸ್ತುಗಳು, ಅವುಗಳ ವಿಧಗಳು, ಅದರಿಂದಾಗುವ ಸಾಮಾಜಿಕ ಮತ್ತು ಆರೋಗ್ಯದ ಮೇಲಿನ ದುಷ್ಪರಿಣಾಮಗಳನ್ನು ತಿಳಿಯಪಡಿಸುವ ಕ್ಯಾಂಪ್‌ಗಳನ್ನು ಪ್ರತಿ ಪಂಚಾಯತ್ ಮಟ್ಟದಲ್ಲಿ ಆಗಿಂದಾಗ್ಗೆ ಏರ್ಪಡಿಸಿ ಜನ ಸಾಮಾನ್ಯರೆಲ್ಲರಿಗೂ ಅರಿವು
ಜೀವ್ ಮಞ್ಞಂಡ್ರ, ನಾಪೋಕ್ಲು

ಮಾದಕ ವಸ್ತುಗಳ ಸೇವೆಯಿಂದ ಬಾಲಕರು, ಯುವಕರು ಮಾನಸಿಕ ರೋಗಿಗಳಾಗುತ್ತಿದ್ದಾರೆ. ನಾನು ಕೂಡ ಇಬ್ಬರು ಯುವಕರನ್ನು ಮಂಗಳೂರು, ಶಿವಮೊಗ್ಗ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದೇನೆ. ಸೋಮವಾರಪೇಟೆ ಆನೆಕೆರೆ, ಜೂನಿಯರ್ ಕಾಲೇಜು, ಎಪಿಎಂಸಿ ಮಾರುಕಟ್ಟೆಯಲ್ಲಿ ಮಾದಕ ವಸ್ತುಗಳ ಸೇವನೆ ಎಗ್ಗಿಲ್ಲದೆ ನಡೆಯುತ್ತಿದೆ. ರಾತ್ರಿ ವೇಳೆ ಕಾರ್ಯಾಚರಣೆ ಮಾಡಬೇಕು.ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು.
ಶೀಲಾ ಡಿಸೋಜ, ಸದಸ್ಯರು, ಪಟ್ಟಣ ಪಂಚಾಯಿತಿ, ಸೋಮವಾರಪೇಟೆ

ಹೊರ ಜಿಲ್ಲೆಗಳಿಂದ ಗಾಂಜಾ ಪೂರೈಕೆ ಮಾಡುವವರನ್ನು ಮಟ್ಟಹಾಕಬೇಕು. ಒಮ್ಮೆ ಸಿಕ್ಕಿಬಿದ್ದರೆ, ಒಂದು ವರ್ಷ ಜಾಮೀನು ಸಿಗದಂತಹ ಕಾನೂನು ತರಬೇಕು. ಯುವ ಸಮುದಾಯ ಮಾದಕ ವಸ್ತುಗಳ ಸೇವನೆ ಎಂಬ ಪಿಡುಗಿಗೆ ಬಲಿಯಾಗುತ್ತಿದ್ದಾರೆ. ಹಣದ ಆಸೆಗೆ ಮುಗ್ಧ ಯುವಕರಿಗೆ ಚಟವನ್ನು ಕಲಿಸುತ್ತಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು.
ಎ.ವಿ. ದರ್ಶನ್, ವರ್ತಕ, ಸೋಮವಾರಪೇಟೆ

ಪೋಷಕರು ಅಥವಾ ಸಾರ್ವಜನಿಕರು ನಿಮ್ಮ ಸುತ್ತಮುತ್ತಲ ವಿದ್ಯಮಾನಗಳ ಬಗ್ಗೆ ಗಮನಹರಿಸಿ. ವಿಶೇಷವಾಗಿ ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನವಿಡಿ. ದುಶ್ಚಟ ಅಂಟಿಸಿಕೊಂಡಿದ್ದರೆ ನಮ್ಮ ಗಮನಕ್ಕೆ ತನ್ನಿ. ಅವರನ್ನು ಅದರಿಂದ ಹೊರತರಲು ಪ್ರಯತ್ನಿಸುತ್ತೇವೆ. ಮಾದಕ ವಸ್ತುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡುಬಂದಲಿ ್ಲ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡುವಂತೆ ಹಾಗೂ ಸಹಕರಿಸುವಂತೆ ಸಾರ್ವಜನಿಕರಲಿ ್ಲ ಕೋರುತೇವೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ.
ಕೆ. ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕೊಡಗು

ಇಂದಿನ ಸಮಾಜದಲ್ಲಿ ಡ್ರಗ್ಸ್ ಮಾಫಿಯಾವನ್ನು ನಾಗರಿಕರು ಆದಾಯದ ಒಂದು ಮೂಲವಾಗಿ ಪರಿಗಣಿಸಿರುವುದು ಕಂಡುಬರುತ್ತಿದೆ. ಇದನ್ನು ತಡೆಗಟ್ಟಲು ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದ ಹೊರಗುಳಿಯದಂತೆ ಎಚ್ಚರವಹಿಸಬೇಕು. ಬಡತನ ಸಮಸ್ಯೆ ಕೂಡ ಮಾದಕ ವ್ಯಸನಿಗಳಗುವುದಕ್ಕೆ ಕಾರಣ ಎಂದು ಹೇಳಬಹುದು. ಸರ್ಕಾರ ಬಿಗಿಯಾದ ಕಾನೂನುಗಳನ್ನು ಜಾರಿಗೊಳಿಸಿ ಮಾದಕ ವಸ್ತು ಮಾರಾಟದ ಜಾಲವನ್ನು ಬೇಧಿಸಲು ಪ್ರಯತ್ನಿಸುವುದು ಮತ್ತು ಅಂತಾರಾಷ್ಟ್ರೀಯ ಸಹಕಾರ ಬಲವರ್ಧನೆಗೆ ಒತ್ತು ನೀಡುವುದು ಮಾದಕ ವಸ್ತುಗಳನ್ನು ತಡೆಗಟ್ಟುವುದಕ್ಕಿರುವ ಕ್ರಮವಾಗಿದೆ.
ಟಿ. ಅಕ್ಷಿತಾ ನಾಯ್ಕ, ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗ, ಕಾವೇರಿ ಕಾಲೇಜು ವಿರಾಜಪೇಟೆ

ಮಾದಕ ಪದಾರ್ಥಗಳಿಗೂ ಮೊದಲು ಜನರು ಸಾರ್ವಜನಿಕವಾಗಿ ಸಿಗರೇಟು, ಬಿಡಿ ಸೇದುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು. ಮದ್ಯಪಾನ, ಸಾರಾಯಿ ಕೂಡಾ ನಿಷೇಧವಾಗಬೇಕು. ಡ್ರಗ್ಸ್ ಅನ್ನು ಯಾರು ತಂದು ಸಾರ್ವಜನಿಕರ ಬಾಯಲ್ಲಿ ಬಲವಂತವಾಗಿ ತುರುಕುವುದಿಲ್ಲ. ಜನರೇ ಹೋಗಿ ಕೊಂಡು ತಿನ್ನುವುದು. ಆದರಿಂದ ಜಾಗೃತಿ ಜನರಿಂದಲೇ ಆರಂಭವಾಗಬೇಕು.
ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಬರಹಗಾರ, ವಿರಾಜಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net