

ಬೆಂಗಳೂರು: ಹಾಡಹಗಲೇ ಮಾದಕವಸ್ತು ಮಾರಾಟ ಮಾಡುತ್ತಿದ್ದ ಡ್ರಗ್ಸ್ ಪೆಡ್ಲರ್ನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಥಣಿಸಂದ್ರದ ಪಿ.ಎಚ್.ಶಬೀರ್(೨೬) ಬಂಧಿತ. ಆರೋಪಿಯಿಂದ ೨ ಲಕ್ಷ ರೂ. ಮೌಲ್ಯದ ೫೦ ಗ್ರಾಂ ತೂಕದ ಎಂಡಿಎಂಎ ಮಾದಕವಸ್ತು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬಾಣಸವಾಡಿಯ ಅಂಕಣರೆಡ್ಡಿ ಲೇಔಟ್ನ ಬಸ್ ನಿಲ್ದಾಣ ರಸ್ತೆಯಲ್ಲಿ ಡಿ.೨೩ರಂದು ಮಧ್ಯಾಹ್ನ ೧.೪೫ರ ಸುಮಾರಿಗೆ ಅಪರಿಚಿತನೊಬ್ಬ ಸಾರ್ವಜನಿಕರಿಗೆ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಕೇರಳ ಮೂಲದ ಆರೋಪಿಯು ನಾಲ್ಕು ತಿಂಗಳ ಹಿಂದೆ ಟ್ಯಾಕ್ಸಿ ಚಾಲಕ ಕೆಲಸಕ್ಕಾಗಿ ನಗರಕ್ಕೆ ಬಂದಿದ್ದ. ಸುಲಭವಾಗಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಕೇರಳ ಹಾಗೂ ಹೆಣ್ಣೂರು ಭಾಗದ ಕೆಲ ಡ್ರಗ್ಸ್ ಪೆಡ್ಲರ್ಗಳ ಸ್ನೇಹ ಸಂಪಾದಿಸಿ, ಕಡಿಮೆ ಬೆಲೆಗೆ ಮಾದಕ ವಸ್ತು ಖರೀದಿಸುತ್ತಿದ್ದ. ಬಳಿಕ ಪರಿಚಿತರು ಹಾಗೂ ಗಿರಾಕಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.