

ಗಂಗಾವತಿ: ದುಶ್ಚಟಗಳಿಂದ ಯುವ ಶಕ್ತಿ ಹಾಳಾಗುತ್ತಿದ್ದು, ನಶೆಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಬೂದಗುಂಪಾ ಕೊಟ್ಟೂರು ಶಾಖಾ ವಿರಕ್ತಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಮನವಿ ಮಾಡಿದರು.
ಇದನ್ನೂ ಓದಿ: ಮಾದಕವಸ್ತು ಎಂಡಿಎಂಎ ಮಾರಾಟ ಆರೋಪಿ ಬಂಧನ
ಪ್ರಶಾಂತ ನಗರದ ಶಾಂತಿ ಸದನದಲ್ಲಿ ಕರ್ನಾಟಕ ಸಾಲಿಡಾರಿಟಿ ಮೂವಮೆಂಟ್ ತಾಲೂಕು ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ನಶೆ ಮುಕ್ತ ಸಮಾಜ ನಿರ್ಮಾಣ ಅಭಿಯಾನದಲ್ಲಿ ಮಾತನಾಡಿದರು.
ಜಾಗೃತಿ ಕೊರತೆಯಿಂದ ಯುವ ಶಕ್ತಿ ಮದ್ಯ, ಮಾದಕವಸ್ತುಗಳಿಗೆ ದಾಸರಾಗುತ್ತಿದ್ದು, ಕಲಿಯುವ ಮತ್ತು ದುಡಿಯುವ ವಯಸ್ಸಿನಲ್ಲಿ ವ್ಯಸನಿಗಳಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗಾಂಜಾ, ಮದ್ಯ, ಡ್ರಗ್ ಸುಲಭವಾಗಿ ದೊರೆಯುತ್ತಿರುವುದು ಶೋಚನೀಯ. ಇದರಿಂದ ಕುಟುಂಬಗಳು ಹಾಳಾಗುತ್ತಿವೆ.
ಆದಾಯದ ನೆಪದಲ್ಲಿ ಸರ್ಕಾರ ಮದ್ಯ ಮಾರಾಟಕ್ಕೆ ಪ್ರೋತ್ಸಾಹಿಸುತ್ತಿರುವುದು ಸರಿಯಲ್ಲ ಎಂದರು. ಸಾಲಿಡಾರಿಟಿ ಯೂಥ್ ಮೂವ್‌ಮೆಂಟ್ ರಾಜ್ಯಾಧ್ಯಕ್ಷ ಅಬೀದ್ ಶಫಿ ಮಾತನಾಡಿ, ಪ್ರತಿಯೊಂದು ವಾರ್ಡ್‌ಗಳಲ್ಲಿ ನಶೆಮುಕ್ತ ಸಮಾಜ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದ್ದು, ಕೊಳಚೆ ಪ್ರದೇಶದಲ್ಲಿ ಹೆಚ್ಚು ಕೇಂದ್ರೀಕೃತಗೊಳಿಸಲಾಗುವುದು ಎಂದರು.
ತಾಲೂಕು ಸಂಚಾಲಕ ನಾಸೀರ್ ಅಹ್ಮದ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಗೌಡ ಹೊಸ್ಮನಿ, ಅಲಿ ಮುರ್ತುಜಾಸಾಬ್, ಅಫೀಜ್ ಅಬ್ದುಲ್ ಸಮದ್ ಇತರರಿದ್ದರು. ನಗರದ ಪ್ರಮುಖ ಕಾಲನಿಗಳಲ್ಲಿ ಮದ್ಯ, ಮಾದಕವಸ್ತುಗಳಿಂದಾಗುವ ನಷ್ಟ ಮತ್ತು ಜಾಗೃತಿ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು.