ಡ್ಯಾನ್ಸರ್ ಸಹಿತ ಇಬ್ಬರ ಬಂಧನ

drug new
Published on

ಮಂಗಳೂರು: ನಗರದ ಮಾದಕ ಜಾಲದಲ್ಲಿ ಮಹತ್ವದ ಕೊಂಡಿಗಳಾಗಿದ್ದ ಡ್ಯಾನ್ಸರ್ ಸಹಿತ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶನಿವಾರ ಮುಂಜಾನೆ ನಡೆಸಲಾದ ಕಾರ್ಯಾಚರಣೆಯಲ್ಲಿ ಮಾದಕ ಜಾಲದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕುಳಾಯಿ ನಿವಾಸಿ ಕಿಶೋರ್ ಅಮನ್ ಶೆಟ್ಟಿ(30) ಹಾಗೂ ಸುರತ್ಕಲ್ ಕಾನ ನಿವಾಸಿ ಅಕೀಲ್ ನೌಶೀಲ್(28) ಬಂಧಿತರು.

ಅಕೀಲ್ ಹಿಂದೆ ವಿದೇಶದಲ್ಲಿ ಸೆಕ್ಯುರಿಟಿ ಆಫೀಸರ್ ಆಗಿದ್ದ. ವರ್ಷದ ಹಿಂದೆ ಸ್ವದೇಶಕ್ಕೆ ಮರಳಿದ್ದು, ನಿರ್ದಿಷ್ಟ ಉದ್ಯೋಗ ಇರಲಿಲ್ಲ.

ಕಿಶೋರ್ ಶೆಟ್ಟಿಗೆ ಮುಂಬೈ ಮತ್ತು ಬೆಂಗಳೂರು ಚಿತ್ರರಂಗದ ನಂಟಿದೆ. ಕಿಶೋರ್ ಡ್ಯಾನ್ಸರ್ ಮತ್ತು ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ. 2011-12ರಲ್ಲಿ ಟಿವಿಯಲ್ಲಿ ಪ್ರಸಾರಗೊಂಡಿದ್ದ ಡಾನ್ಸ್ ಇಂಡಿಯಾ ಡಾನ್ಸ್ ಸೀಸನ್-2 ನೃತ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ. ಡಾನ್ಸ್ ಕೀ ಸೂಪರ್ ಸ್ಟಾರ್‌ನಲ್ಲಿ ಬಹುಮಾನ ಪಡೆದಿದ್ದ. ಎಬಿಸಿಡಿ ಎನ್ನುವ ಹಿಂದಿ ಸಿನಿಮಾದಲ್ಲೂ ನಟಿಸಿದ್ದ.

ಇಬ್ಬರು ಜತೆಯಾಗಿ ಮುಂಬೈ ಹಾಗೂ ಬೆಂಗಳೂರಿನಿಂದ ಎಂಡಿಎಂನಂತಹ ಮಾದಕ ವಸ್ತುಗಳನ್ನು ಖರೀದಿಸಿ ತಂದು ಮಂಗಳೂರಿನಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು. ಶನಿವಾರ ಮುಂಜಾನೆ ಪೊಲೀಸರು ಕದ್ರಿಪದವುನಲ್ಲಿ ದಾಳಿ ನಡೆಸಿದ ವೇಳೆ ಆರೋಪಿಗಳು ಒಂದೇ ಮೋಟಾರು ಬೈಕ್‌ನಲ್ಲಿದ್ದರು. ಬಂಧಿತರಿಂದ ಪೌಡರ್ ರೂಪದಲ್ಲಿದ್ದ ನಿಷೇಧಿತ ಎಂಡಿಎಂಎ ಮಾದಕ ವಸ್ತು, ಬೈಕ್, ಎರಡು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ 1ಲಕ್ಷ ರೂ.ಆಗಿದೆ.

ಬಂಧಿತರ ಮೇಲೆ ಎನ್‌ಡಿಪಿಎಸ್ ಕಾಯ್ದೆಯಡಿ ಇಕಾನಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಂ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಆಯುಕ್ತರು ತಿಳಿಸಿದರು.

ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್.ನಾಯಕ್, ನಾರ್ಕೋಟಿಕ್ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿ ಎಸ್‌ಐ ಕಬ್ಬಾಳ್ ರಾಜ್ ಮತ್ತು ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದರು.

ಡಿಸಿಪಿಗಳಾದ ಅರುಣಾಂಗ್ಶುಗಿರಿ, ವಿನಯ್ ಗಾಂವ್ಕರ್ ಸುದ್ದಿಗೋಷ್ಠಿಯಲ್ಲಿದ್ದರು.

ಆರೋಪಿಗಳು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾದಕ ದ್ರವ್ಯ ಮಾರಾಟದಲ್ಲಿ ತೊಡಗಿದ್ದರು. ಇವರ ಮುಂಬೈ ಮತ್ತು ಬೆಂಗಳೂರು ನಂಟಿನ ಮಾಹಿತಿ ಲಭಿಸಿದೆ. ಇನ್ನಷ್ಟು ಮಂದಿಗಾಗಿ ಶೋಧ ನಡೆಯುತ್ತಿದೆ.

-ವಿಕಾಸ್ ಕುಮಾರ್, ಮಂಗಳೂರು ಪೊಲೀಸ್ ಆಯುಕ್ತ

ಡ್ರಗ್ಸ್ ಬಲೆಯಲ್ಲಿ ಪ್ರತಿಭೆ ಸಿಲುಕಿದ್ದು ಹೇಗೆ?

ಮಂಗಳೂರು: ಕೆಲ ವರ್ಷಗಳ ಹಿಂದೆ ತನ್ನ ಪರಿಶ್ರಮದಿಂದಲೇ ಮೇಲೆದ್ದು ಬಂದ ಪ್ರತಿಭಾವಂತನೆಂದು ಸುದ್ದಿಯಾಗಿದ್ದ ಕಿಶೋರ್ ಅಮನ್ ಈಗ ಕಿಶೋರ್ ಶೆಟ್ಟಿಯಾಗಿ ಡ್ರಗ್ಸ್ ಸೇವನೆ ಹಾಗೂ ಪೆಡ್ಲಿಂಗ್ ಆರೋಪದಲ್ಲಿ ಸೆರೆಯಾಗಿರುವುದು ಅಚ್ಚರಿ ಹಾಗೂ ಬೇಸರಕ್ಕೆ ಕಾರಣವಾಗಿದೆ.

ಕುಳಾಯಿಯ ಬಡ ಕುಟುಂಬದಿಂದ ತಂದೆಯಿಲ್ಲದೆ ಬೆಳೆದುಬಂದ ಹುಡುಗನಿಗೆ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಮೂಲಕ ಮುಂಬೈ ಪರಿಚಯವಾಗಿದೆ, ಅಲ್ಲಿಂದ ಹಲವು ಶೋಗಳಲ್ಲಿ ಭಾಗಿಯಾಗುವುದರ ಜತೆಗೆ ಬಾಲಿವುಡ್‌ನ ಎಬಿಸಿಡಿ(ಎನಿಬಡಿ ಕ್ಯಾನ್‌ಡ್ಯಾನ್ಸ್) ಸಿನಿಮಾದಲ್ಲೂ ಒಂದು ಪಾತ್ರ ಸಿಕ್ಕಿದೆ. ಮುಂಬೈನ ಡ್ಯಾನ್ಸರ್‌ಗಳಾದ ಗಣೇಶ್ ಆಚಾರ್ಯ, ರೆಮೊ ಡಿ’ಸೋಜ ಮತ್ತಿತರರ ಪರಿಚಯವಾಗಿದೆ. ಆದರೆ ಮೂಲಗಳ ಪ್ರಕಾರ ಇದರೊಂದಿಗೆ ಕಿಶೋರ್ ಶೋಗಳಿಗೆ ಬರುತ್ತಿದ್ದ ಮಾದಕ ವಸ್ತು ಸೇವಿಸುವಂತಹವರ ಸಂಪರ್ಕವೂ ಏರ್ಪಟ್ಟಿದೆ. ಅಲ್ಲಿಂದಲೇ ಇದಕ್ಕೆ ಸಿಲುಕಿದ್ದ ಕಿಶೋರ್ ನಿಧಾನವಾಗಿ ಬದಲಾಗಿಬಿಟ್ಟರು ಎನ್ನಲಾಗುತ್ತಿದೆ.

ಪೊಲೀಸ್ ಮೂಲಗಳ ಪ್ರಕಾರ ಕಿಶೋರ್ ಹಾಗೂ ಶನಿವಾರ ಬಂಧಿತನಾದ ಸುರತ್ಕಲ್‌ನ ಅಕೀಲ್ ಇಬ್ಬರೂ ಮುಂಬೈನಿಂದ ಡ್ರಗ್ಸ್ ತರಿಸಿ ಅದನ್ನು ಬೆಂಗಳೂರು, ಮಂಗಳೂರಿನಲ್ಲಿ ಹಂಚುವ ಕೆಲಸ ಮಾಡುತ್ತಿದ್ದರು. ಲಭ್ಯ ಮಾಹಿತಿ ಪ್ರಕಾರ ಇವರ ಜಾಲದೊಳಗೆ ಇನ್ನಿಬ್ಬರು ನಟಿಯರ ಹೆಸರು ಕೇಳಿಬರುತ್ತಿದ್ದು, ಅವರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯೂ ಇದೆ.

ಶೆಟ್ಟಿ ಅಲ್ಲ?: ಕಿಶೋರ್ ಅಮನ್ ಎನ್ನುವುದು ಈತನ ನಿಜ ಹೆಸರಾಗಿತ್ತು, ನಿಜವಾಗಿ ಬಂಟ ಸಮಾಜದವರಲ್ಲದಿದ್ದರೂ ತನ್ನ ಹೆಸರನ್ನು ಕಿಶೋರ್ ಶೆಟ್ಟಿ ಎಂದು ಬದಲಾಯಿಸಿಕೊಂಡಿದ್ದ ಎಂದೂ ಹೇಳಲಾಗುತ್ತಿದೆ. ಪೊಲೀಸರು ನೀಡಿರುವ ಮಾಹಿತಿಯಲ್ಲಿ ಕಿಶೋರ್ ಶೆಟ್ಟಿ ತಂದೆ ಹೆಸರು ಬಾಲಕೃಷ್ಣ ಶೆಟ್ಟಿ ಎಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net