ಮೈಸೂರಿನಲ್ಲಿ ಮಾದಕ ವಸ್ತು ಮಾರಾಟ : ಕೇರಳದ ಇಬ್ಬರು ಬಂಧನ

Drugs (3)
Published on

ಮೈಸೂರು: ದೇಹದ ಮೇಲೆ ಸಾಕಷ್ಟು ಅಡ್ಡಪರಿಣಾಮಗಳನ್ನು ಬೀರುವ ಈ ಮಾದಕ ವಸ್ತುವನ್ನು ದಸರಾ ಸಂದರ್ಭ ಮಾರಾಟ ಮಾಡಲು ಆಗಮಿಸಿದ ಕೇರಳದ ಇಬ್ಬರು ಯುವಕರು ಪೊಲೀಸರ ಅತಿಥಿಯಾಗಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ದಸರಾ ಉತ್ಸವಕ್ಕೆ ದೇಶ ವಿದೇಶದಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ, ಹೀಗಾಗಿ ದಸರಾದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಾದಕ ವಸ್ತು ಮಾರಾಟ ಮಾಡಬಹುದು ಎಂಬ ಲೆಕ್ಕಾಚಾರದೊಂದಿಗೆ ಆಗಮಿಸಿದ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು ಎಂಡಿಎಂಎ ಮಾದಕ ವಸ್ತು ಹಾಗೂ ಗಾಂಜಾವನ್ನು ನಗರದಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದರು ಎಂದು ತಿಳಿಸಿದರು.

ನೈಜೀರಿಯಾ ನಂಟು: ನಗರದ ಸರ್ಕಾರಿ ಅತಿಥಿ ಗೃಹದ ಬಳಿ ಶಂಕಾಸ್ಪದವಾಗಿ ಅ.26 ರಂದು ನಿಂತಿದ್ದ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಡ್ರಗ್ಸ್ ಮಾರಾಟ ಬಯಲಿಗೆ ಬಂದಿದೆ. ಆರೋಪಿಗಳಿಂದ 12 ಲಕ್ಷ ರೂ. ವೌಲ್ಯದ 217 ಗ್ರಾಂ ತೂಕದ ನಿಷೇಧಿತ ಮಾದಕವಸ್ತು ಎಂಡಿಎಂಎ ಮತ್ತು ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ನೈಜೀರಿಯಾ ನಂಟು ಇರುವುದು ತನಿಖೆಯಿಂದ ಬಯಲಾಗಿದೆ ಎಂದರು.

ಬಂಧಿತ ಇಬ್ಬರು ಕೇರಳದ ಯುವಕರ ಪೈಕಿ ಒಬ್ಬ ಬೆಂಗಳೂರಿನಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾನೆ. ಮತ್ತೋಬ್ಬ ಮುಂಬೈನಲ್ಲಿ ಲೈಟ್‌ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಇವರಿಬ್ಬರು ಸ್ನೇಹಿತರಾಗಿದ್ದಾರೆ. ಮೈಸೂರಿನಲ್ಲಿ ಸಂಬಂಧಿಕರನ್ನು ಹೊಂದಿದ್ದ ಮುಂಬೈನ ಲೈಟ್‌ಬಾಯ್ ಮೈಸೂರು ದಸರಾ ಸಂದರ್ಭ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಹಿನ್ನೆಲೆಯಲ್ಲಿ ಮಾದಕ ವಸ್ತು ಮಾರಾಟ ಮಾಡಿ ಉತ್ತಮ ಹಣ ಗಳಿಸಬಹುದು ಎಂದು ಕಾನೂನು ವಿದ್ಯಾರ್ಥಿಗೆ ಆಸೆ ಹುಟ್ಟಿಸಿದ. ನಂತರ ಇಬ್ಬರು ಸೇರಿಕೊಂಡು ನಗರಕ್ಕೆ ಆಗಮಿಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಸಂದರ್ಭ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net