

ಬೆಂಗಳೂರು: ಮಾದಕ ದ್ರವ್ಯ ಮಾರಾಟ ದಂಧೆಯಲ್ಲಿ ತೊಡಗಿದ್ದ ಯುಟ್ಯೂಬ್ ಚಾನೆಲ್ ಆರ್ಟಿಸ್ಟ್ ಸೇರಿ ಇಬ್ಬರನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಆಶ್ರೀಕ್ ಮತ್ತು ಕೇರಳ ಮೂಲದ ಚೀಪಾಗ್ ಬಂಧಿತರು. 1.60 ಕೋಟಿ ರೂ. ಮೌಲ್ಯದ 2ಕೆಜಿ 60 ಗ್ರಾಂ ಹಾಶಿಶ್ ಆಯಿಲ್ ಜಪ್ತಿ ಮಾಡಲಾಗಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.
ಬೇಗೂರು ಕೊಪ್ಪ ರಸ್ತೆಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಲಭ್ಯವಾಗಿತ್ತು. ಮಫ್ತಿಯಲ್ಲಿ ಪೊಲೀಸರು ತೆರಳಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಮಡಿವಾಳದಲ್ಲಿ ಪೇಯಿಂಗ್ ಗೆಸ್ಟ್ ನೆಡೆಸುವ ಸೋಗಿನಲ್ಲಿ ಆರೋಪಿಗಳು ಕಟ್ಟಡ ಬಾಡಿಗೆ ಪಡೆದಿದ್ದರು. ಜತೆಗೆ ಯುಟ್ಯೂಬ್ ಚಾನೆಲ್ ಆರ್ಟಿಸ್ಟ್ ಮ್ಯಾನೇಜ್‌ಮೆಂಟ್ ಬಿಸಿನೆಸ್ ಮಾಡುವುದಾಗಿ ಹೇಳಿಕೊಂಡು ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದರು.
ಆಂಧ್ರಪ್ರದೇಶದ ಡ್ರಗ್ಸ್ ಪೆಡ್ಲರ್‌ನಿಂದ ಕಡಿಮೆ ಬೆಲೆಗೆ ಹ್ಯಾಶಿಶ್ ಖರೀದಿಸಿ ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಆಯಿಲ್‌ನ್ನು ಹೆಚ್ಚಿನ ಬೆಲೆಗೆ ಸಾಪ್ಟ್‌ವೇರ್ ಇಂಜಿನಿಯರ್, ಉದ್ಯಮಿಗಳು, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.