

ಬೆಂಗಳೂರು: ಪಂಕಜ ಕಸ್ತೂರಿ ಹರ್ಬಲ್ ಇಂಡಿಯಾ ಪ್ರ್ಱೈ.ಲಿ ಕರೊನಾ ರೋಗ ಗುಣಪಡಿಸಲು ಸಂಶೋಧಿಸಿರುವ ‘ಝಿಂಗಿವೀರ್ಎಚ್’ ಔಷಧ ಕ್ಲಿನಿಕಲ್ ಟ್ರಯಲ್ನ ಮಧ್ಯಂತರ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಫಲಿತಾಂಶವು ಉತ್ತಮವಾಗಿದ್ದು, ಕ್ಲಿನಿಕಲ್ ಟ್ರಯಲ್ ಮುಂದುವರಿದಿದೆ.
ಪಂಕಜ ಕಸ್ತೂರಿ ಹರ್ಬಲ್ ಇಂಡಿಯಾ ಪ್ರ್ಱೆ.ಲಿ.ನ ಸಂಸ್ಥಾಪಕ ಡಾ.ಜೆ.ಹರೇಂದ್ರನ್ ನಾಯರ್ ಈ ಔಷಧವನ್ನು ಸಂಶೋಧಿಸಿದ್ದು, ಏಳು ಪದಾರ್ಥಗಳನ್ನು ಒಗ್ಗೂಡಿಸಿ ತಯಾರಿಸಲಾಗಿದೆ. ಈ ಕುರಿತು ಮಾತನಾಡಿರುವ ಡಾ.ಜೆ.ಹರೇಂದ್ರನ್ ನಾಯರ್, ಆಯುರ್ವೆದದಲ್ಲಿ ಎಲ್ಲ ರೋಗಗಳನ್ನೂ ಗುಣಪಡಿಸುವ ಶಕ್ತಿ ಇದೆ. ಪ್ರತಿನಿತ್ಯದ ಅಲರ್ಜಿ ಸಹ ನಮ್ಮನ್ನು ದೊಡ್ಡ ರೋಗದ ಕೂಪಕ್ಕೆ ತಳ್ಳುತ್ತದೆ. ಇದರಿಂದ ನಮ್ಮ ರೋಗನಿರೋಧಕ ಶಕ್ತಿಯು ಕಡಿಮೆಯಾಗುತ್ತ ಹೋಗುತ್ತದೆ. ದೊಡ್ಡ ರೋಗವನ್ನು ಎದುರಿಸುವ ಶಕ್ತಿಯನ್ನು ಆಯುರ್ವೆದ ನೀಡಲಿದೆ.
ಝಿಂಗಿವೀರ್ಎಚ್ ಅನ್ನು 112 ರೋಗಿಗಳಿಗೆ ನೀಡಲಾಗಿದೆ. ಹೆಚ್ಚುವರಿ 135 ರೋಗಿಗಳಿಗೆ ನೀಡಿ ಎರಡು ಹಂತದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಈ ಪೈಕಿ 42 ರೋಗಿಗಳ ಮಧ್ಯಂತರ ವರದಿ ತಲುಪಿದೆ. ಇದರಲ್ಲಿ 22 ರೋಗಿಗಳು ಝಿಂಗಿವೀರ್ ಹಾಗೂ 20 ರೋಗಿಗಳಿಗೆ ಪ್ಲೇಸ್ಬೋ ಚಿಕಿತ್ಸೆ ನೀಡಲಾಗಿತ್ತು. ಎಲ್ಲ 22 ರೋಗಿಗಳು ಕೇವಲ 5 ದಿನಗಳಲ್ಲೇ ಗುಣಮುಖರಾಗಿದ್ದಾರೆ. ಉಳಿದ 20 ರೋಗಿಗಳಿಗೆ ಪ್ಲಾಸ್ಬೋ ಮುಂದುವರಿಸಲಾಗುತ್ತಿದೆ. ಇದರ ಫಲಿತಾಂಶ ಕೂಡ ಮುಂದಿನ 11 ದಿನಗಳಲ್ಲಿ ಲಭ್ಯವಾಗಲಿದೆ ಎಂದು ವಿವರಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ನಮ್ಮ ಔಷಧಕ್ಕೆ ಮಾನ್ಯತೆ ಸಿಕ್ಕ ಬಳಿಕ ಸರ್ಕಾರದ ಜತೆಗೂಡಿಯೇ ಕರೊನಾ ಸೋಂಕಿತರಿಗೆ ವಿತರಿಸುತ್ತೇವೆ. ಆನಂತರ ವಿಶ್ವಕ್ಕೆ ವಿತರಣೆ ಕಾರ್ಯ ಆರಂಭವಾಗಲಿದೆ. ಇದು ಕರೊನಾ ಬರುವುದನ್ನು ತಡೆಯಲಿದೆ. ತಿರುವನಂತಪುರದ ರಾಜೀವ್ ಗಾಂಧಿ ಆರೋಗ್ಯ ಕೇಂದ್ರದಲ್ಲಿರುವ ರೋಗಿಗಳ ಮೇಲೆ ಪ್ರಯೋಗ ನಡೆಸಲಾಗುತ್ತಿದೆ. ಇದಕ್ಕೆ ಕೇರಳ ಸರ್ಕಾರ ಅನುಮತಿ ನೀಡಿದೆ. ಈ ಮಧ್ಯಂತರ ಕ್ಲಿನಿಕಲ್ ವರದಿಯನ್ನು ಐದು ಸದಸ್ಯರ ನೇತೃತ್ವದ ಡೇಟಾ ಮಾನಿಟರಿಂಗ್ ಸಮಿತಿ (ಡಿಎಂಸಿ) ಮೌಲ್ಯಮಾಪನ ಮಾಡಿದೆ. ಈ ಪರೀಕ್ಷಾ ಫಲಿತಾಂಶವನ್ನು ಆಯುಷ್ ಇಲಾಖೆಗೆ ಕಳುಹಿಸಲಾಗಿದೆ ಎಂದು ನಾಯರ್ ತಿಳಿಸಿದ್ದಾರೆ.