

ಬೆಂಗಳೂರು: ವೆಬ್ಸೀರೀಸ್ನಿಂದ ಪ್ರೇರಿತನಾಗಿ ಡಾರ್ಕ್ನೆಟ್ನಲ್ಲಿ ಆರ್ಡರ್ ಮಾಡಿ ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪಾವತಿಸಿ ವಿದೇಶದಿಂದ ಡ್ರಗ್ಸ್ ಖರೀದಿಸುತ್ತಿದ್ದ ಕುಖ್ಯಾತ ಗ್ಯಾಂಗ್ನ್ನು ಮಾದಕ ದ್ರವ್ಯ ನಿಯಂತ್ರಣ ದಳ (ಎನ್ಸಿಬಿ) ಬಂಧಿಸಿದೆ. ಕೇರಳ ಮೂಲದ ಫಾಹೀಂ(23), ಕಾರ್ತಿಕ್ ಪ್ರಮೋದ್(25) ಹಾಗೂ ಮಂಗಳೂರು ಎ. ಹಶೀರ್ (22) ಮತ್ತು ಎಸ್.ಎಸ್ ಶೆಟ್ಟಿ (22) ಬಂಧಿತರು. ಪೆಡ್ಲರ್ಗಳಿಂದ 750 ಎಂಡಿಎಂಎ ಮಾತ್ರೆ ಜಪ್ತಿ ಮಾಡಲಾಗಿದೆ ಎಂದು ಎನ್ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಜು.30ರಂದು ನೆದರ್ಲ್ಯಾಂಡ್ನಿಂದ ಭಾರತದ ವಿದೇಶಿ ಅಂಚೆ ಕಚೇರಿಗೆ ಪಾರ್ಸೆಲ್ನಲ್ಲಿ ಡ್ರಗ್ಸ್ ರವಾನಿಸಲಾಗಿತ್ತು. ಪಾರ್ಸಲ್ ಸ್ವೀಕರಿಸಬೇಕಿದ್ದ ಸಂಸ್ಥೆ ಅಥವಾ ವ್ಯಕ್ತಿಯ ಹೆಸರು, ವಿಳಾಸ ನಮೂದು ಮಾಡಿರಲಿಲ್ಲ. ಅದನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಡ್ರಗ್ಸ್ ಪತ್ತೆಯಾಗಿತ್ತು.
ಆದರೆ, ಅದರ ವಾರಸುದಾರರು ಯಾರೆಂದು ಗೊತ್ತಾಗಿರಲಿಲ್ಲ. ಈ ಬಗ್ಗೆ ತಾಂತ್ರಿಕ ಮಾಹಿತಿಯನ್ನು ಪಡೆದು ಎನ್ಸಿಬಿ ಅಧಿಕಾರಿಗಳ ತಂಡಗಳು ತನಿಖೆ ನಡೆಸಿದಾಗ ಪಾರ್ಸಲ್ ಸ್ವೀಕರಿಸಬೇಕಿದ್ದ ಮಾದಕ ವಸ್ತು ಜಾಲದ ಆರೋಪಿ ಪ್ರಮೋದ್ ಎಂಬಾತ ಸೆರೆಸಿಕ್ಕಿದ್ದ. ಈತನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದಾಗ ಜಾಲದ ಮಾಸ್ಟರ್ವೆುೖಂಡ್ ಫಾಹೀಂ ಮತ್ತು ಆತನ ಸಹಚರರಾದ ಎ. ಹಶೀರ್ ಮತ್ತು ಎಸ್.ಎಸ್. ಶೆಟ್ಟಿ ಎಂಬುವರು ಪತ್ತೆಯಾಗಿದ್ದಾರೆ. ಈ ಎಲ್ಲ ಆರೋಪಿಗಳನ್ನು ವಶಕ್ಕೆ ಪಡೆದು ಮನೆಗಳ ಮೇಲೆ ದಾಳಿ ನಡೆಸಿದಾಗ ಮಾದಕ ದ್ರವ್ಯ ಪತ್ತೆಯಾಗಿದ್ದು, ಹಲವು ವಿಚಾರಗಳು ಬೆಳಕಿಗೆ ಬಂದಿವೆ ಎಂದು ಎನ್ಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಮುಖ ಆರೋಪಿ ಫಾಹೀಂ ವೆಬ್ಸೀರೀಸ್ನಿಂದ ಪ್ರೇರಿತನಾಗಿ ಡಾರ್ಕ್ನೆಟ್ ಡ್ರಗ್ಸ್ ಖರೀದಿಸುವ ಬಗ್ಗೆ ಪ್ಲಾ್ಯನ್ ಮಾಡಿ ಕಲಿತಿದ್ದಾನೆ. ಡಾರ್ಕ್ವೆಬ್ನಲ್ಲಿ ವಿದೇಶಿ ಪೆಡ್ಲರ್ಗಳನ್ನು ಸಂಪರ್ಕ ಮಾಡಿ ಅವರಿಂದ ಕೊರಿಯರ್ ಮೂಲಕ ಡ್ರಗ್ಸ್ ಪಡೆಯುತ್ತಿದ್ದ. ಅದಕ್ಕೆ ಪ್ರತಿಯಾಗಿ ಬಿಟ್ಕಾಯಿನ್ನಲ್ಲಿ ಹಣ ಪಾವತಿಸುತ್ತಿದ್ದ. ಕಳೆದ 2 ವರ್ಷಗಳಿಂದ
ಡ್ರಗ್ಸ್ ದಂಧೆ ನಡೆಸುತ್ತಿದ್ದ ಫಾಹೀಂ, ಆರ್ಡರ್ ಮಾಡುತ್ತಿದ್ದ ಮಾದಕ ದ್ರವ್ಯವನ್ನು ಆತನ ಸಹಚರರು ಸ್ವೀಕರಿಸುತ್ತಿದ್ದರು. ಕೇರಳ, ಚೆನ್ನೈ, ಮಂಗಳೂರು, ಬೆಂಗಳೂರು ಸೇರಿ ಹಲವೆಡೆ ವಿದ್ಯಾರ್ಥಿಗಳು, ಸಾಫ್ಟ್ವೇರ್ ಇಂಜಿನಿಯರ್ಗಳನ್ನು ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡು ಡ್ರಗ್ಸ್ ಸರಬರಾಜು ಮಾಡುತ್ತಿದ್ದರು.
ಒಂದೇ ಕಾಲೇಜಿನ ವಿದ್ಯಾರ್ಥಿಗಳು
ಉಡುಪಿಯ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಫಾಹೀಂ, ಮೊದಲು ವೆಬ್ಸೀರೀಸ್ನಲ್ಲಿ ಕಲಿತು ನೆದರ್ಲ್ಯಾಂಡ್ನಿಂದ ಡ್ರಗ್ಸ್ ಖರೀದಿಸಿ ಸಹಪಾಠಿಗಳಿಗೆ ಮಾರಾಟ ಮಾಡಿದ್ದಾನೆ. ಇತರರು ಆತನ ಸಹಚರರಾಗಿ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರು, ಚೆನ್ನೈ, ದೆಹಲಿ, ಮಂಗಳೂರು, ಕೇರಳ ಸೇರಿ ದೇಶದ ಹಲವೆಡೆ ಇರುವ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳನ್ನು ಸಂಪರ್ಕ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು.