ತಮಿಳು ಚಿತ್ರದ ಮಾದರಿಯಲ್ಲಿ ಡ್ರಗ್ಸ್​ ಸಾಗಿಸುತ್ತಿದ್ದ ಖದೀಮ!

drugpeddler
Published on

ಬೆಂಗಳೂರು: ಡ್ರಗ್ಸ್​ ಪೆಡ್ಲರ್​ಗಳ ಹೆಡೆಮುರಿ ಕಟ್ಟಲು ಪಣ ತೊಟ್ಟಿರುವ ಬೆಂಗಳೂರಿನ ಖಾಕಿ ಪಡೆ, ಇದೀಗ ಚಾಲಾಕಿ ಅಂತರರಾಜ್ಯ ಡ್ರಗ್​ ಪೆಡ್ಲರ್​ ಒಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತಮಿಳು ಚಿತ್ರದ ಮಾದರಿಯಲ್ಲಿ ಫೇಸ್​ ಪೌಡರ್​ ಡಬ್ಬಿಯಲ್ಲಿ ಹೆರಾಯಿನ್​ ಸಾಗಿಸಿ ತರುತ್ತಿದ್ದ ಖದೀಮನನ್ನು ನಗರದ ಕೆ.ಜಿ.ಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಸೋರಾಯ್ ಸ್ಯಾಮ್ ಬೋರಿಸ್ ಸಿಂಗ್ ಎಂಬುವ ಬಂಧಿತ ಆರೋಪಿ. ಈತ ಥೇಟ್​​ ತಮಿಳಿನ ಐಯನ್ ಸಿನಿಮಾದಲ್ಲಿ ಬಳಸಿದ್ದ ಟೆಕ್ನಿಕ್ ಬಳಸಿ ಸ್ಮಗ್ಲಿಂಗ್ ನಡೆಸುತ್ತಿದ್ದ. ಪಾಂಡ್ಸ್ ಪೌಡರ್ ಡಬ್ಬಿಯಲ್ಲಿ ಹೆರಾಯಿನ್​ ತುಂಬಿಸಿ, ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ ಬೆಂಗಳೂರಿಗೆ ತರುತ್ತಿದ್ದ ಎನ್ನಲಾಗಿದೆ.

ಆರೋಪಿಯು ಬೇರೆ ರಾಜ್ಯಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ತಂದು ನಗರದಾದ್ಯಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಇದೇ ರೀತಿ ಎಚ್​​ಬಿಆರ್ ಲೇಔಟಿನ ಅಮ್ಮಾಸ್ ಬೇಕರಿ ಹಿಂಭಾಗ ಡ್ರಗ್ಸ್ ಮಾರಾಟ ಮಾಡುವ ವೇಳೆ ಸಿಕ್ಕಿಬಿದ್ದ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಸೋರಾಯ್ ಸ್ಯಾಮ್ ಬೋರಿಸ್ ಸಿಂಗ್​​ ವಿರುದ್ಧ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವನಿಂದ 2 ಲಕ್ಷ ರೂ. ಮೌಲ್ಯದ 10 ಗ್ರಾಂ ಹೆರಾಯಿನ್, ನಗದು ಹಣ, ಡ್ರಗ್ ಸಪ್ಲೈ ಮಾಡಲು ಬಳಸಿದ್ದ ಪ್ಲಾಸ್ಟಿಕ್ ಡಬ್ಬಿಗಳು, 3 ಏರ್ ಇಂಡಿಯಾ ಫ್ಲೈಟ್​​ನ ಬೋರ್ಡಿಂಗ್ ಪಾಸ್ ಮತ್ತು ಕಪ್ಪು ಬಣ್ಣದ ಬ್ಯಾಗನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net