

ಹುಬ್ಬಳ್ಳಿ: ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ನಿಮಿತ್ತ ಇಲ್ಲಿಯ ಕಾರವಾರ ರಸ್ತೆಯ ಸಿಎಆರ್ ಮೈದಾನದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆದಾರರ ಪರೇಡ್ ಸೋಮವಾರ ಜರುಗಿತು.
ಪರೇಡ್‌ನಲ್ಲಿ 400ಕ್ಕೂ ಜನರು ಭಾಗವಹಿಸಿದ್ದರು. ಹಬ್ಬದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಲ್ಲಿ ತೊಡಗದಂತೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಖಡಕ್ ಸೂಚನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಈ ವರ್ಷ ಗಡಿಪಾರು ಮಾಡಿದ 105 ಜನರಲ್ಲಿ 19 ಡ್ರಗ್ ಪೆಡಲರ್ಸ್‌ಗಳೂ ಇದ್ದಾರೆ. ಸಾಮಾನ್ಯ ಜನರಿಗೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಈ ದಿನ ಡ್ರಗ್ ಪೆಡಲರ್ಸ್ ಮತ್ತು ಬಳಕೆದಾರರ ಪರೇಡ್ ಮಾಡಿ ಎಚ್ಚರಿಕೆ ನೀಡಲಾಗಿದೆ.
ನಗರದಲ್ಲಿ 800ಕ್ಕೂ ಹೆಚ್ಚು ಜನ ಡ್ರಗ್ ಬಳಕೆದಾರರಿದ್ದು, ತಪಾಸಣೆ ವೇಳೆ ಇವರೆಲ್ಲರಿಗೂ ಪಾಸಿಟಿವ್ ಬಂದಿದೆ. ಸೋಮವಾರ 400 ಜನರ ಪರೇಡ್ ಮಾಡಿದ್ದು, ಇನ್ನೂ ಕೆಲವರು ಮಾಹಿತಿ ತಿಳಿದು ಪರಾರಿಯಾಗಿದ್ದಾರೆ. ಅಂಥವರ ಮನೆಗೆ ತೆರಳಿ ಅವರಿಗೆ ಎಚ್ಚರಿಕೆ ನೀಡಲಾಗುವುದು ಎಂದರು.
ರೌಡಿಶೀಟರ್ ವಿರುದ್ಧ ಕ್ರಮ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾನವ ಹಕ್ಕು ಆಯೋಗದ ಅಧಿಕಾರಿಯೆಂದು ಗಿರೀಸ ಮಟ್ಟಣ್ಣವರ ಪರಿಚಯಿಸಿದ್ದ ಮದನ ಬುಗಡಿ ವಿರುದ್ಧ ಕೊಲೆ ಸೇರಿ 7 ಪ್ರಕರಣಗಳು ದಾಖಲಾಗಿವೆ. ಆತನ ಮೇಲೆ ಹಳೆ ಹುಬ್ಬಳ್ಳಿಯಲ್ಲಿ 5, ಕೇಶ್ವಾಪುರದಲ್ಲಿ 1 ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ 1 ಪ್ರಕರಣವಿದೆ. ಈ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಕಡೆ ಪ್ರಕರಣಗಳಿವೆಯೇ? ಎನ್ನುವ ಕುರಿತು ಮಾಹಿತಿ ಕಲೆಹಾಕುತ್ತಿದ್ದೇವೆ. ಹಿಂದಿನ ಪರೇಡ್‌ಗೆ ಈ ವ್ಯಕ್ತಿಯನ್ನು ಕರೆ ತರಲಾಗಿತ್ತು. ವಿವಿಧ ಸಂಘಟನೆಗಳಲ್ಲಿ ತೊಡಗಿಕೊಂಡಿದ್ದು ತನ್ನ ವಿರುದ್ಧವಿದ್ದ ರೌಡಿಶೀಟರ್ ತೆಗೆಯುವಂತೆ ಪೊಲೀಸರಿಗೆ ಆವಾಜ್ ಹಾಕಿದ್ದ. ಅಲ್ಲದೆ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಕೇಸ್ ಮುಗಿದ ತಕ್ಷಣ ರೌಡಿಶೀಟರ್ ತೆಗೆಯಬೇಕೆಂದು ನಿಯಮವಿಲ್ಲ. ನಮ್ಮ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಇನ್ನೂ ಅಪರಾಧಿಕ ಚಟುವಟಿಕೆಯಲ್ಲಿ ಇದ್ದ. ಹೀಗಾಗಿ ರೌಡಿಶೀಟರ್ ಮುಂದುವರಿಸಿದ್ದಾರೆ. ಮಾನವ ಹಕ್ಕು ಅಧಿಕಾರಿ ಎಂದು ಆತ ಮಾಧ್ಯಮದ ಮುಂದೆ ಬರುತ್ತಾನೆಂಬ ಮಾಹಿತಿ ಇದೆ. ಅಪರಾಧಿಕ ಹಿನ್ನೆಲೆ ಇರುವವರು ದಲಿತ ಸಂಘಟನೆ ಹೆಸರು ಹೇಳಿಕೊಳ್ಳುತ್ತಾರೆ. ಅಂಬೇಡ್ಕರ್ ಭಾವಚಿತ್ರವಿರುವ ಪೆನ್ನು ಜೇಬಿನಲ್ಲಿ ಇಟ್ಟಿಕೊಂಡಿದ್ದ. ರೌಡಿ ಶೀಟರ್‌ಗಳು ಮಾನವ ಹಕ್ಕು ಅಧಿಕಾರಿ ಎಂದು ಹೇಳಿಕೊಳ್ಳುವುದು ಆಘಾತಕಾರಿ ವಿಷಯ. ಈ ಕುರಿತು ಇನ್ನಷ್ಟು ಮಾಹಿತಿ ಕಲೆ ಹಾಕಲಾಗುವುದು ಎಂದರು.
ಡಿಸಿಪಿಗಳಾದ ಸಿ.ಆರ್. ರವೀಶ, ಯಲ್ಲಪ್ಪ ಕಾಶಪ್ಪನವರ, ಎಸಿಪಿಗಳಾದ ಶಿವಪ್ರಸಾದ ನಾಯಕ್, ವೀರೇಶ, ಡಾ. ಶಿವರಾಜ ಕಟಕಭಾವಿ, ಪ್ರಶಾಂತ ಸಿದ್ದನಗೌಡರ, ವಿಜಯಕುಮಾರ ತಳವಾರ ಇತರರು ಇದ್ದರು.