

ಬೆಳಗಾವಿ: ನಗರದ ವ್ಯಾಕ್ಸಿನ್ ಡಿಪೋ(ಲಸಿಕಾ ಘಟಕ)ದಲ್ಲಿ 13.35 ಕೋಟಿ ರೂ. ವೆಚ್ಚದಲ್ಲಿ ಆಯುಷ್ ಔಷಧ ತಯಾರಿಕಾ ಕೇಂದ್ರದ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.
ವ್ಯಾಕ್ಸಿನ್ ಡಿಪೋ, 456 ರೀತಿಯ ವಿವಿಧ ಗಿಡಮೂಲಿಕೆ ಹೊಂದಿರುವ ವಿಶೇಷ ಪ್ರದೇಶವಾಗಿದೆ. ಅಲ್ಲಿ ಔಷಧ ತಯಾರಿಕಾ ಕೇಂದ್ರ ಸ್ಥಾಪಿಸಿದರೆ ಅನುಕೂಲವಾಗಲಿದೆ. ಯೋಜನೆಗೆ ಸರ್ಕಾರವು 10 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಸರ್ಕಾರದಿಂದಲೇ ಔಷಧ ತಯಾರಿಸುತ್ತಿರುವ ಈ ಘಟಕ ದೇಶದಲ್ಲಿಯೇ ಮೊದಲಾಗಿದೆ. ಈ ಘಟಕದಲ್ಲಿ ಸಿದ್ಧವಾಗುವ ಎಲ್ಲ ಬಗೆಯ ಔಷಧ ಅಥವಾ ಪರಿಕರಗಳು ರಾಜ್ಯದ ಇತರ ಆಯುಷ್ ಕೇಂದ್ರಗಳಿಗೆ ಸರಬರಾಜಾಗಲಿವೆ.
ದೇಶ ವಿದೇಶಗಳಿಗೂ ರಪ್ತುಗೊಳ್ಳುತ್ತವೆ. ಹೀಗಾಗಿ ಈ ಕೇಂದ್ರವನ್ನು ಬೇರೆ ಕಡೆ ನಿರ್ಮಿಸದೆ ಬೆಳಗಾವಿ ಲಸಿಕಾ ಘಟಕದಲ್ಲಿಯೇ ಸ್ಥಾಪಿಸಲಾಗುತ್ತಿದೆ. ಇದು ಉತ್ತರ ಕರ್ನಾಟಕಕ್ಕೆ ಅತಿ ಮಹತ್ವದ ಕೊಡುಗೆಯಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.