

ಮೈಸೂರು: ನಗರದ ಡ್ರಗ್ಸ್ ಮಾಫಿಯ ಕುರಿತು ಅಮೂಲಾಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಬಿಜೆಪಿ ನಗರ ವಕ್ತಾರ ಎಂ.ವಿ.ಮೋಹನ್ ಮಾತನಾಡಿ, ಮೈಸೂರು ನಗರವು ಕಲೆ, ಸಾಹಿತ್ಯ, ಸಂಗೀತ, ಪರಂಪರೆಗೆ ಹೆಸರುವಾಸಿ. ಆದರೆ, ನಗರ ಡ್ರಗ್ಸ್ ಕಾರಣಕ್ಕೆ ಸುದ್ದಿಯಲ್ಲಿರುವುದು ಆಘಾತಕಾರಿ ವಿಚಾರ. ಮೈಸೂರಿನಲ್ಲಿ ಡ್ರಗ್ಸ್ ತಯಾರಿಸಿ ವಿವಿಧ ರಾಜ್ಯಗಳಿಗೆ ಪೂರೈಕೆ ಮಾಡುತ್ತಿರುವ ಅಂಶ ಮಹಾರಾಷ್ಟ್ರ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಮೈಸೂರು ಡ್ರಗ್ಸ್ ಫ್ಯಾಕ್ಟರಿಯಾಗಿ ಮಾರ್ಪಾಡು ಹೊಂದಿರುವುದು ಆತಂಕಕಾರಿ ವಿಚಾರ. ಪ್ರಕರಣ ವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ನಗರದ ವರ್ತುಲ ರಸ್ತೆಯಲ್ಲಿ 390 ಕೋಟಿ ರೂ.ಗೂ ಹೆಚ್ಚು ಮೊತ್ತದ ಮಾದಕ ದ್ರವ್ಯ ಪತ್ತೆಯಾಗಿದೆ. ನಗರದಲ್ಲಿಯೇ ಡ್ರಗ್ಸ್ ತಯಾರಿಕೆ ನಡೆಯುತ್ತಿದ್ದರೂ ಪೊಲೀಸರ ಗಮನಕ್ಕೆ ಬಾರದೆ ಇರುವುದು ಅಚ್ಚರಿ ಮೂಡಿಸಿದೆ. ಈ ಪ್ರಕರಣದ ವಿಚಾರದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹಾಗೂ ದೇಶದ್ರೋಹಿ ಕೃತ್ಯಗಳನ್ನು ತಡೆಯಲು ವಿಫಲವಾಗಿರುವ ಡಾ.ಜಿ.ಪರಮೇಶ್ವರ್ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಇತ್ತೀಚೆಗೆ ರಾಜ್ಯದ ಪ್ರಭಾವಿ ಸಚಿವರೊಬ್ಬರ ಆಪ್ತನೊಬ್ಬನು ಡ್ರಗ್ಸ್ ಪೂರೈಕೆ ಹಾಗೂ ಮಾರಾಟದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದ. ರಾಜ್ಯದ ಸಚಿವರ ಮೂಗಿನ ಕೆಳಗೆಯೇ ಡ್ರಗ್ಸ್ ಫೂರೈಕೆಯ ಜಾಲ ಇರುವ ಸಂಶಯವಿದೆ ಎಂದು ಆರೋಪಿಸಿದರು.
ಈ ಹಿಂದೆ ಬೆಂಗಳೂರು, ಮಂಗಳೂರಿನಂತಹ ನಗರಗಳಲ್ಲಿ ಡ್ರಗ್ಸ್ ಮಾಫಿಯ ಸಕ್ರಿಯವಾಗಿತ್ತು. ಆದರೆ, ನಗರದಲ್ಲಿ ಡ್ರಗ್ಸ್ ಮಾಫಿಯ ಕಂಡು ಬಂದಿರಲಿಲ್ಲ. ಡ್ರಗ್ಸ್ ಸೇವನೆಯಿಂದ ಯುವಜನರು ದಾರಿ ತಪ್ಪುತ್ತಿದ್ದಾರೆ. ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ಯುವಜನರನ್ನು ಅದರಿಂದ ಆಚೆ ತರುವ ಕಾರ್ಯ ಆಗಬೇಕು. ನಗರದ ಎಲ್ಲ ಕಡೆಗಳಲ್ಲೂ ತಪಾಸಣೆ ನಡೆಸಿ ಡ್ರಗ್ಸ್ ಪೂರೈಕೆ ಮಾಡುವವರನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಜಿ.ಗಿರಿಧರ್, ಬಿ.ಎಂ.ರಘು, ಉಪಾಧ್ಯಕ್ಷ ಜೋಗಿ ಮಂಜು, ಯುವ ಮೋರ್ಚಾ ಅಧ್ಯಕ್ಷ ಆರ್.ರಾಕೇಶ್ ಗೌಡ, ಮಾಜಿ ಅಧ್ಯಕ್ಷ ಎಂ.ಜೆ.ಕಿರಣ್ ಗೌಡ, ಮುಖಂಡರಾದ ಗೋಪಾಲ್ ರಾವ್, ಭರತ್, ರಾಕೇಶ್ ಭಟ್, ಕೃಷ್ಣನಾಯಕ, ಜಯರಾಮ್ ಹಾಗೂ ಇತರರು ಪಾಲ್ಗೊಂಡಿದ್ದರು.