

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಯುವಜನತೆ, ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚುತ್ತಿರುವ ಹಿನೆಲೆಯಲ್ಲಿ ‘ಮಾದಕ ಮುಕ್ತ ಕೇರಳ’ ಯೋಜನೆಯನ್ವಯ ಅಬಕಾರಿ ಇಲಾಖೆ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಮದ್ಯಪಾನ, ಮಾದಕ ದ್ರವ್ಯಗಳ ಸೇವನೆ ಗಂಭೀರತೆ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾದಕ ದ್ರವ್ಯ ವಿರೋಧಿ ಅಭಿಯಾನ ಆರಂಭಿಸಲಾಗಿದೆ. ಆಲ್ಕೋಹಾಲ್, ಡ್ರಗ್ಸ್, ತಂಬಾಕು ಬಳಕೆ ಕಡಿಮೆ ಮಾಡುವುದು, ಅಕ್ರಮ ಮಾದಕ ದ್ರವ್ಯದ ದಾಸ್ತಾನು, ಕಳ್ಳ ಸಾಗಣೆ ಮೂಲ ಗುರುತಿಸಿ ಅದರ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸುವುದು ಯೋಜನೆ ಉದ್ದೇಶವಾಗಿದೆ.
ಯೋಜನೆ ಅಂಗವಾಗಿ ಇಳಂಬಚ್ಚಿ ಗುರು ಚಂತು ಪಣಿಕ್ಕರ್ ಸ್ಮಾರಕ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭಿಸಲಾದ ವ್ಯಾಯಾಮ ಶಾಲೆಯನ್ನು ಶಾಸಕ ಎಂ.ರಾಜಗೋಪಾಲನ್ ಉದ್ಘಾಟಿಸಿದರು. ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚುತ್ತಿದೆ. ಕಲೆ, ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಮೂಲಕ ಮತ್ತೆ ಅಧ್ಯಯನಕ್ಕೆ ತಿರುಗಿಸಲು ಅಬಕಾರಿ ಇಲಾಖೆ ವಿಮುಕ್ತಿ ಮಿಷನ್‌ನ ವಿನೂತನ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವ್ಯಸನದ ವಿರುದ್ಧ ಕ್ರೀಡೆ
ವಿದ್ಯಾರ್ಥಿಗಳು ಮಾದಕ ದ್ರವ್ಯ ಬಳಕೆ ಮಾಡದಿರುವ ಜತೆಗೆ ಅವರಲ್ಲಿ ಕೌಶಲ ಮೂಡಿಸುವ ಕೆಲಸವನ್ನು ‘ಜಾಗೃತಿ’ ಯೋಜನೆಯನ್ವಯ ನಡೆಸಲಾಗುತ್ತಿದೆ. ಶಾಲೆಗಳಲ್ಲಿ ಕ್ರೀಡಾ ಕಾರ್ಯಕ್ರಮಗಳಿಗೆ ಪ್ರಾಮುಖ್ಯತೆ ನೀಡಲು, ‘ವ್ಯಸನದ ವಿರುದ್ಧ ಕ್ರೀಡೆ’ ಎಂಬ ಘೋಷಣೆಯಡಿಯಲ್ಲಿ ಜಿಮ್ ಸೌಲಭ್ಯ, ಕ್ರೀಡಾ ಸಾಮಗ್ರಿ ವಿತರಿಸುವ ಗುರಿಯೊಂದಿಗೆ ಯೋಜನೆ ಜಾರಿಗೊಳಿಸಲಾಗುತ್ತಿದೆ.