ಮಾದಕ ವಸ್ತು ದೇಶದ ದೊಡ್ಡ ಸಮಸ್ಯೆ: ಜಿಲ್ಲಾಧಿಕಾರಿ ಡಾ.ಕುಮಾರ ಆತಂಕ

Drug Free India Campaign Mandya
Published on

ಮಂಡ್ಯ: ಮಾದಕ ವಸ್ತುಗಳ ಸೇವನೆ ದೇಶದ ಅಭಿವೃದ್ಧಿಗೆ ಎದುರಾಗಿರುವ ಅತಿ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಅರಿತುಕೊಂಡು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ ನೀಡಿದರು.

ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ನಶೆ ಮುಕ್ತ ಭಾರತ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮೆಲ್ಲರ ಮೇಲಿರುವ ಅತಿ ದೊಡ್ಡ ಸಾಮಾಜಿಕ ಜವಾಬ್ದಾರಿ ಎಂದರೆ ಮಾದಕ ವಸ್ತುಗಳನ್ನು ಯುವ ಜನತೆ ಸೇವನೆ ಮಾಡದಂತೆ ನೋಡಿಕೊಳ್ಳುವುದು. ಜತೆಗೆ ಮಾದಕ ವ್ಯಸನಿಗಳನ್ನು ಸರಿ ದಾರಿ ತರುವುದಾಗಿದೆ ಎಂದು ಹೇಳಿದರು.

ಪ್ರಸ್ತುತ ಸಮಾಜದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಲು ಕಾರಣ ಡ್ರಗ್ ಅಡಿಕ್ಷನ್. ನಮ್ಮಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳನ್ನು ಪರಿಶೀಲಿಸಿ ನೋಡಿದರೆ ಬಹು ಪಾಲು ಅಪರಾಧ ಕೃತ್ಯಗಳು ಮಾದಕ ವ್ಯಸನದಿಂದ ಉಂಟಾಗಿರುವುದು ಕಂಡು ಬರುತ್ತದೆ. ಪೊಲೀಸ್ ಇಲಾಖೆ ಜತೆಗೂಡಿ ಸಾರ್ವಜನಿಕರು ಸಮಾಜವನ್ನು ಮಾದಕ ವಸ್ತುಗಳಿಂದ ಮುಕ್ತ ಮಾಡುವ ಹೊಣೆಗಾರಿಕೆ ನಮ್ಮೆಲ್ಲರದು ಎಂದರು.

ವಿಶೇಷವಾಗಿ ವಿದ್ಯಾರ್ಥಿಗಳು ತಮ್ಮ ಕಾಲೇಜು, ಕುಟುಂಬ, ಸುತ್ತ ಮುತ್ತಲಿನಲ್ಲಿ ದುಶ್ಚಟಗಳಿಗೆ ಬಲಿಯಾದವರ ಮನ ಪರಿವರ್ತನೆ ಹಾಗೂ ಸುಧಾರಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಮನುಷ್ಯನ ಜೀವನ ಅತ್ಯಂತ ಪವಿತ್ರವಾದುದ್ದು, ಜೀವನವನ್ನು ಕ್ಷಣಿಕ ಸುಖಕ್ಕೆ ಬಲಿ ಕೊಡಬೇಡಿ. ಒಳ್ಳೆಯ ಸಂಸ್ಕಾರ ಒಳ್ಳೆಯ ಆಚಾರ ವಿಚಾರಗಳನ್ನು ಕಲಿಯಬೇಕು. ಉತ್ತಮ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು. ನೈತಿಕ ಮೌಲ್ಯವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಮಾದಕ ವಸ್ತುಗಳಿಂದ ದೂರವಿದ್ದು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ಸಮಾಜಕ್ಕೆ ಆಸ್ತಿಯಾಗಬೇಕು ಎಂದು ಅರಿವು ಮೂಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ದೇಶದ ಯುವ ಜನತೆ, ಕಾರ್ಮಿಕರು ಹೆಚ್ಚಾಗಿ ದುಶ್ಚಟಗಳಿಗೆ ದಾಸರಾಗಿ ತಮ್ಮ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ದುಶ್ಚಟಗಳಿಗೆ ದಾಸರಾಗಿರುವವರನ್ನು ಅದರಿಂದ ಮುಕ್ತವಾಗಿಸಲು, ರಕ್ಷಿಸಲು ಹಾಗೂ ಅವರನ್ನು ಸರಿದಾರಿಗೆ ತರಲು ಕೇಂದ್ರ ಸರ್ಕಾರ 2020 ರಿಂದ ನಶಾಮುಕ್ತ ಭಾರತ ಅಭಿಯಾನವನ್ನು ಪ್ರಾರಂಭಿಸಿತು ಎಂದು ಹೇಳಿದರು.

ಅಭಿಯಾನದ ಮೂಲ ಉದ್ದೇಶ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾನಿಲಯ, ಶಾಲಾ ಕಾಲೇಜುಗಳ ಮಕ್ಕಳಿಗೆ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತ ತಿಳಿವಳಿಕೆ ನೀಡುವುದಾಗಿದೆ. ಈಗಾಗಲೇ ನಾರ್ಕೋಟಿಕ್ ಬ್ಯೂರೋ ದೇಶಾದ್ಯಂತ ಮಾದಕ ವ್ಯಸನಿಗಳು ಸರಿಪಡಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನಗಳಿಂದ ದೂರವಿರಬೇಕು ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು. ಅಪರ ಪೊಲೀಸ್ ಅಧೀಕ್ಷಕ ಎಸ್.ಇ.ಗಂಗಾಧರಸ್ವಾಮಿ, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಪ್ರಾಂಶುಪಾಲ ಡಾ.ಹನುಮಂತ ಪ್ರಸಾದ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶಾಧಿಕಾರಿ ತಿಮ್ಮರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net