ವ್ಯಸನ ಮುಕ್ತಿ ವ್ಯಕ್ತಿತ್ವ ಪರಿವರ್ತನೆಯ ಮೊದಲ ಪ್ರಯತ್ನ

6 Dwd 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮನುಷ್ಯನ ಹವ್ಯಾಸ, ಚಟಗಳು ವ್ಯಸನಗಳಾದಾಗ ಆತನ ಬದುಕು ಕಷ್ಟಕರವಾಗಿ, ನಡತೆಯಲ್ಲಿ ದೋಷಿಯಾಗುತ್ತಾನೆ. ವ್ಯಸನದಿಂದ ಮುಕ್ತವಾಗುವುದು ವ್ಯಕ್ತಿತ್ವದ ಪರಿವರ್ತನೆಯ ಮೊದಲ ಪ್ರಯತ್ನ. ಬದುಕಿನಲ್ಲಿ ಅಳವಡಿಸಿಕೊಳ್ಳುವ ಉತ್ತಮ ಅಭ್ಯಾಸಗಳು ಸುಂದರವಾಗಿಸುತ್ತವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ ಹೇಳಿದರು.

ನಗರದ ಕೇಂದ್ರ ಕಾರಾಗೃಹದ ಗಾಂಧಿ ಭವನದಲ್ಲಿ ಜಿಲ್ಲಾಡಳಿತದಿಂದ ಇಲಕಲ್ಲ ಡಾ. ಮಹಾಂತ ಅಪ್ಪಗಳ ಜನ್ಮದಿನದ ನಿಮಿತ್ತ ಬುಧವಾರ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯ ಸಾಮಾಜಿಕವಾಗಿ, ಕೌಟುಂಬಿಕವಾಗಿ ನೆಮ್ಮದಿಯಿಂದ ಇರಬೇಕಾದರೆ ದುಶ್ಚಟಗಳಿಂದ ದೂರವಿರಬೇಕು. ವ್ಯಸನಗಳನ್ನು ತ್ಯಜಿಸಿ ನಂತರ ಮತ್ತೆ ಅದನ್ನೇ ಮುಂದುವರಿಸಿದರೆ ಮಹಾಂತಪ್ಪನವರಿಗೆ ದ್ರೋಹ ಮಾಡಿದಂತೆ ಎಂದರು.

ಪೊಲೀಸ್ ವರಿಷ್ಠಾಽಕಾರಿ ಗುಂಜನ್ ಆರ್ಯ ಮಾತನಾಡಿ, ನಿಮ್ಮಲ್ಲಿ ಅನೇಕರು ಇಲ್ಲಿರಲು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ವ್ಯಸನ ಕಾರಣವಾಗಿರಬಹುದು. ಒಂದು ಕ್ಷಣದ ತಪ್ಪು ನಿರ್ಧಾರ, ಸ್ನೇಹಿತರ ಒತ್ತಡ ಅಥವಾ ಮಾನಸಿಕ ಒತ್ತಡದಿಂದಾಗಿ ಶುರುವಾದ ಚಟ, ನಿಮ್ಮ ಬದುಕನ್ನೇ ಕತ್ತಲಲ್ಲಿ ಮುಳುಗಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಅಧೀಕ್ಷಕ ಮಹಾದೇವ ನಾಯ್ಕ ಮಾತನಾಡಿ, ಇಲಕಲ್ಲ ಡಾ. ಮಹಾಂತಪ್ಪಗಳ ಬದುಕಿನ ಪ್ರೇರಣೆ ಎಲ್ಲರಿಗೂ ಸಿಗಬೇಕು. ವ್ಯಸನಗಳ ಕಾರಣಗಳಿಂದಾಗಿ ಕಾರಾಗೃಹ ಸೇರಿರುವ ಮನಸ್ಸುಗಳಲ್ಲಿ ಬದಲಾವಣೆ ಆಗಬೇಕು ಎಂದರು.

ಡಿಮ್ಹಾನ್ಸ್ನ ಮನೋವೈದ್ಯ ಡಾ. ಮಹೇಶ ಎಂ. `ಮಾದಕ ವಸ್ತು ಹಾಗೂ ವ್ಯಸನ ಮುಕ್ತತೆಯ ಉಪಾಯಗಳು' ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕಿ ನಿರ್ಮಲ ಬಿ.ಆರ್. ಸ್ವಾಗತಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಸ್.ಎಂ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೇಂದ್ರ ಕಾರಾಗೃಹದ ಶಿಕ್ಷಕ ಪಿ.ಬಿ. ಕುರುಬೆಟ್ಟ ನಿರೂಪಿಸಿದರು.

ಕಾರಾಗೃಹದ ಮನೋವೈದ್ಯ ಡಾ. ಲೋಕನಾಥ ಪುಠಾಣಿಕರ ಮತ್ತು ಜೈಲರ್‌ಗಳಾದ ಮಹಾದೇವಿ ಮರಕಟ್ಟಿ, ದೀಪಾ ರಾಮದುರ್ಗ, ಸುರೇಶ ಕರಗಾವಿ, ಚೇತನ ಕರೋಳಿ, ಸತೀಶ ವಡ್ಡರ, ಸಿಬ್ಬಂದಿ ಹಾಗೂ ಶಿಕ್ಷಾಬಂದಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net