ಆರೋಪಿಗಳಿಗೆ ಪೊಲೀಸ್ ಕಸ್ಟಡಿ

drug new
Published on

ಮಂಗಳೂರು: ಮಾದಕ ವಸ್ತು ಸೇವನೆ ಹಾಗೂ ಸಾಗಾಟ ಆರೋಪದ ಮೇಲೆ ಶನಿವಾರ ಬಂಧನಕ್ಕೆ ಒಳಗಾಗಿರುವ ಕೊರಿಯೋಗ್ರಾಫರ್ ಮತ್ತು ಡ್ಯಾನ್ಸರ್ ಕಿಶೋರ್ ಅಮನ್ (30) ಹಾಗೂ ಸಹಚರ ಅಕೀಲ್ ನೌಶೀಲ್(28) ಅವರನ್ನು ಹೆಚ್ಚಿನ ವಿಚಾರಣೆಗೆ ನ್ಯಾಯಾಲಯ 7ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

ಭಾನುವಾರ ಇಬ್ಬರನ್ನೂ ಕೋವಿಡ್ ಟೆಸ್ಟ್‌ಗೆ ಒಳಪಡಿಸಲಾಗಿದ್ದು, ಸೋಮವಾರ ವರದಿ ಬರುವ ನಿರೀಕ್ಷೆಯಿದೆ. ಅಲ್ಲಿವರೆಗೆ ಪೂರ್ಣ ಪ್ರಮಾಣದಲ್ಲಿ ವಿಚಾರಣೆ ಆರಂಭಿಸುವಂತಿಲ್ಲ. ನೆಗೆಟಿವ್ ವರದಿ ಬಂದರೆ ವಿಚಾರಣೆ ಮುಂದುವರಿಯಲಿದೆ, ಪಾಸಿಟಿವ್ ಬಂದರೆ ಸರ್ಕಾರದ ಮಾರ್ಗಸೂಚಿ ಅನ್ವಯ ಚಿಕಿತ್ಸೆ ಪ್ರಕ್ರಿಯೆ ನಡೆಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಡ್ಯಾನ್ಸ್ ಪ್ರದರ್ಶನದ ವೇಳೆ ಎನರ್ಜಿಗಾಗಿ ಮಾದಕ ಸೇವನೆ ಚಟ ಆರಂಭಿಸಿದ ಕಿಶೋರ್ ಕುಮಾರ್ ಆರು ತಿಂಗಳ ಹಿಂದೆ ಡ್ರಗ್ಸ್ ದಂಧೆ ಶುರು ಮಾಡಿದ್ದ. ಮುಂಬೈನಲ್ಲಿ ಕೆಲವು ಚಿತ್ರಗಳಲ್ಲಿ ಚಿಕ್ಕ ಪುಟ್ಟ ಪಾತ್ರ ನಿರ್ವಹಿಸುತ್ತ, ಡ್ಯಾನ್ಸರ್ ಆಗಿದ್ದ ಆತ ಕೆಲ ತಿಂಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದ. ಇಲ್ಲಿನ ಕುಳಾಯಿಗುಡ್ಡೆಯಲ್ಲಿ ಚಿಕ್ಕ ಹೆಂಚಿನ ಮನೆಯಲ್ಲಿ ಕುಟುಂಬ ವಾಸವಾಗಿದೆ. ಕರೊನಾ ಲಾಕ್‌ಡೌನ್ ಬಳಿಕ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದ. ಹಾಗಾಗಿ ಡ್ರಗ್ಸ್ ದಂಧೆ ಶುರು ಮಾಡಿಕೊಂಡಿದ್ದ. ಮುಂಬೈ ಸ್ನೇಹಿತರ ನಂಟು ಇದ್ದುದರಿಂದ ಅನ್‌ಲಾಕ್ ಬಳಿಕ ಅಲ್ಲಿಂದ ಡ್ರಗ್ಸ್ ತರಿಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಿಶೋರ್ ಅಮನ್ ಕೊಕೇನ್ ಮಾತ್ರ ಸೇವನೆ ಮಾಡುತ್ತಿದ್ದ, ಆದರೆ ಅಪಾಯಕಾರಿ ಎಂಡಿಎಂಎ ಸೇವನೆ ಮಾಡುತ್ತಿರಲಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಡ್ರಗ್ಸ್ ಪಾರ್ಟಿ ಮಾಡುವ ಉದ್ದೇಶ ಹೊಂದಿದ್ದ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ ಎಂದು ವಿಚಾರಣೆಯಿಂದ ಗೊತ್ತಾಗಿದೆ.

ನಗರದಲ್ಲಿ ಆರೋಪಿಗಳು ಯುವತಿಯರು, ಕಾಲೇಜು ವಿದ್ಯಾಥಿಗಳಿಗೆ ಮಾದಕ ಸಾಗಾಟ ಮಾಡುತ್ತಿದ್ದರು. ಆದರೆ ಬೇರೆ ಯಾವುದೇ ಪ್ರತಿಷ್ಠಿತ ವ್ಯಕ್ತಿಗಳ ಜತೆ ಒಡನಾಟ ಹೊಂದಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಈ ಆರೋಪಿಗಳು ಸಾಮಾನ್ಯ ಮಾದಕ ಸೇವನೆ, ಮಾರಾಟ ಆರೋಪಿಗಳೆಂದು ತಿಳಿದು ಬಂದಿದೆ. ಈ ವಿಚಾರದಲ್ಲಿ ಮತ್ತಷ್ಟು ವಿಚಾರಣೆ ನಡೆಸಿದಾಗ ಪ್ರಕರಣದ ಸತ್ಯಾಂಶ ತಿಳಿದು ಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎಸೆಸ್ಸೆಲ್ಸಿ ಓದಿದ್ದ ಕಿಶೋರ್

ಕಿಶೋರ್ ಅಮನ್ ಕಲಿತದ್ದು ಕೇವಲ 10ನೇ ತರಗತಿ. ಆದರೆ ಡ್ಯಾನ್ಸಿಂಗ್‌ನಲ್ಲಿ ರಾಜ್ಯದ ಗಮನ ಸೆಳೆದು ಭರವಸೆಯ ಕಲಾವಿದನಾಗಿ ಹೊರಹೊಮ್ಮಿದ್ದ. ಹಿಂದಿ ಚಿತ್ರದಲ್ಲೂ ಸಣ್ಣ ಮಟ್ಟದ ಪಾತ್ರ ನಿರ್ವಹಿಸಿದ್ದ. ಕಿಶೋರ್ ಎಸೆಸ್ಸೆಲ್ಸಿ ಕಲಿತರೂ ಪ್ರತಿಭಾವಂತನಾಗಿದ್ದುದರಿಂದ ಅವಕಾಶಗಳು ಅವನಿಗೆ ದೊರಕಿತ್ತು. ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗುವುದಕ್ಕಿಂತ ಡ್ಯಾನ್ಸರ್ ಆಗಿಯೇ ಉತ್ತಮ ಭವಿಷ್ಯ ರೂಪಿಸಬಹುದಿತ್ತು ಎಂದು ಆತನನ್ನು ಹತ್ತಿರದಿಂದ ಬಲ್ಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net