

ಬೆಂಗಳೂರು : ಡಾರ್ಕ್ ವೆಬ್‌ನಲ್ಲಿ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧಿತ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಆತನ ಸ್ನೇಹಿತರಿಗೆ ನೆರವು ನೀಡಿದ ಆರೋಪದ ಮೇರೆಗೆ ಸದಾಶಿವನಗರ ಮುಖ್ಯಪೇದೆ ಪ್ರಭಾಕರ್ ತಲೆದಂಡವಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಗೋವಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳಿಗೆ ತನಿಖೆ ಬಗ್ಗೆ ಪ್ರಭಾಕರ್ ಮಾಹಿತಿ ನೀಡುತ್ತಿದ್ದ. ತನಿಖಾಧಿಕಾರಿಗಳ ಟವರ್ ಲೋಕೇಷನ್ ಮತ್ತು ಸಿಮ್ ವಿಳಾಸಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಆರೋಪಿಗಳಿಗೆ ಪ್ರಭಾಕರ್ ಶೇರ್ ಮಾಡಿ ಹಣ ಪಡೆಯುತ್ತಿದ್ದ.
ಕೆಂಪೇಗೌಡನಗರ ಠಾಣೆಯ ತನಿಖಾಧಿಕಾರಿಗಳ ಆರೋಪಿಗಳ ವಿಚಾರಣೆ ವೇಳೆ ಮುಖ್ಯಪೇದೆ ಅಕ್ರಮ ವ್ಯವಹಾರವನ್ನು ಬಾಯ್ಬಿಟ್ಟಿದ್ದಾರೆ. ಈ ಕುರಿತು ತನಿಖಾಧಿಕಾರಿ ನೀಡಿದ ವರದಿ ಮೇರೆಗೆ ಪ್ರಭಾಕರ್‌ನನ್ನು ಅಮಾನುತಗೊಳಿಸಿ ಇಲಾಖಾ ವಿಚಾರಣೆಗೆ ಕೇಂದ್ರ ವಿಭಾಗ ಡಿಸಿಪಿ ಎಂ.ಎನ್. ಅನುಚೇತ್ ಆದೇಶಿಸಿದ್ದಾರೆ.
ದೆಹಲಿಯಲ್ಲಿ ಅಪರಾಧ ತನಿಖೆಯಲ್ಲಿ ತಂತ್ರಜ್ಞಾನ ಬಳಕೆ ಕುರಿತು ಪ್ರಭಾಕರ್ ವಿಶೇಷ ತರಬೇತಿ ಪಡೆದಿದ್ದ. ಆನಂತರ ಸದಾಶಿವನಗರ ಠಾಣೆಗೆ ನಿಯೋಜಿಸಲಾಗಿತ್ತು. ಅಪರಾಧ ಪ್ರಕರಣಗಳಲ್ಲಿ ಮೊಬೈಲ್ ಕರೆಗಳ ಪರಿಶೀಲನೆ ಕಾರ್ಯದಲ್ಲಿ ಪ್ರಭಾಕರ್ ನಿಸೀಮರಾಗಿದ್ದ. ಇದನ್ನೇ ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಹಂಚಿಕೊಂಡು ವಿವಾದಕ್ಕೆ ಸಿಲುಕಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.