ಮತ್ತೋರ್ವ ಡ್ರಗ್ಸ್ ಪೆಡ್ಲರ್ ಸೆರೆ

DRUGS
Published on

ಮಂಗಳೂರು: ನಗರದಲ್ಲಿ ಸಾರ್ವಜನಿಕರಿಗೆ ಡ್ರಗ್ಸ್ ಮಾರಾಟ ಮಾಡಲು ಯತ್ನಿಸುತ್ತಿದ ಆರೋಪದಲ್ಲಿ ನಗರ ಅಪರಾಧ ಪತ್ತೆದಳದ ಪೊಲೀಸರು ಶನಿವಾರ ಸುರತ್ಕಲ್ ಸೂರಿಂಜೆ ನಿವಾಸಿ ಮಹಮ್ಮದ್ ಶಾಕೀರ್ (35) ಎಂಬಾತನನ್ನು ಬಂಧಿಸಿದ್ದಾರೆ. ಈ ಮೂಲಕ 10 ದಿನದಲ್ಲಿ ಬಂಧಿತರಾದವರ ಸಂಖ್ಯೆ ಐದಕ್ಕೆ ಏರಿದೆ.

ಆರೋಪಿಯಿಂದ 23 ಸಾವಿರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾದಕ ವಸ್ತು ಎಂಡಿಎಂಎ ಸೇವನೆ ಹಾಗೂ ಮಾರಾಟ ಆರೋಪದಲ್ಲಿ ಡ್ಯಾನ್ಸರ್ ಕಿಶೋರ್ ಅಮನ್(30) ಹಾಗೂ ಅಕೀಲ್ ನೌಶೀಲ್(28) ಎಂಬುವರನ್ನು ನಗರ ಸಿಸಿಬಿ ಪೊಲೀಸರು ಸೆ.19ರಂದು ಬಂಧಿಸಿದ್ದರು. ಮಹಮ್ಮದ್ ಶಾಕೀರ್‌ಗೆ ಮುಂಬೈಯಿಂದ ಡ್ರಗ್ಸ್ ತಂದುಕೊಡುವುದಾಗಿ ವಿಚಾರಣೆಯಲ್ಲಿ ಆರೋಪಿಗಳು ಹೇಳಿದ್ದರು. ಈ ಮಾಹಿತಿ ಹಿನ್ನೆಲೆಯಲ್ಲಿ ಶಾಕೀರ್‌ನನ್ನು ಬಂಧಿಸಲಾಗಿದೆ.

ಬಂಧಿತ ಮಹಮ್ಮದ್ ಶಾಕೀರ್ ಮುಂಬೈಯಿಂದ ನಿಷೇಧಿತ ಡ್ರಗ್ಸ್ ತಂದು ನಗರದಲ್ಲಿ ಕಿಶೋರ್, ಶಾಕೀರ್ ಸೇರಿದಂತೆ ಇತರರಿಗೆ ಮಾರಾಟ ಮಾಡುತ್ತಿದ್ದ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹೆಚ್ಚಿನ ವಿಚಾರಣೆ ಹಾಗೂ ಕೋವಿಡ್ ಪರೀಕ್ಷೆ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಹಲವರಿಗೆ ಬಂಧನ ಭೀತಿ

ಶಾಕೀರ್ ಇನ್ಯಾರಿಗೆಲ್ಲ ಮಾದಕ ವಸ್ತು ತಂದುಕೊಡುತ್ತಿದ್ದ ಎಂಬುದು ಪೊಲೀಸ್ ವಿಚಾರಣೆಯಿಂದ ಇನ್ನಷ್ಟೇ ತಿಳಿಯಬೇಕಿದೆ. ಹಾಗಾಗಿ ಇನ್ನಷ್ಟು ಮಂದಿ ಬಂಧನ ಸಾಧ್ಯತೆ ಇದೆ. ಈತನೊಂದಿಗೆ ಸಂಪರ್ಕ ಹೊಂದಿದ್ದ ಹಲವರಿಗೆ ಬಂಧನ ಭೀತಿಯೂ ಆರಂಭವಾಗಿದೆ. ಕಿಶೋರ್ ಹಾಗು ಅಕೀಲ್ ನೀಡಿದ ಮಾಹಿತಿ ಮೇರೆಗೆ ಮಣಿಪುರದ ಯುವತಿ ಆಸ್ಕಾ, ಡ್ಯಾನ್ಸರ್ ತರುಣ್‌ರಾಜ್, ನಟಿ, ನಿರೂಪಕಿ ಅನುಶ್ರೀ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ಪೈಕಿ ಆಸ್ಕಾ ಹಾಗು ತರುಣ್ ರಾಜ್ ವಿರುದ್ಧ ಡ್ರಗ್ಸ್ ಸೇವನೆ ಪ್ರಕರಣ ದಾಖಲಿಸಲಾಗಿದೆ. ಅನುಶ್ರೀ ಶನಿವಾರದ ವಿಚಾರಣೆಯಲ್ಲಿ ಸಮರ್ಪಕ ಉತ್ತರ ನೀಡದ ಕಾರಣ ತನಿಖೆ ನಡೆಸುವಾಗ ಮತ್ತೊಮ್ಮೆ ವಿಚಾರಣೆಗಾಗಿ ಕರೆಯುವ ಸಾಧ್ಯತೆ ಇದೆ. ಈ ನಡುವೆ, ಪೊಲೀಸರು ಆಕೆಯ ವೈದ್ಯಕೀಯ ಪರೀಕ್ಷೆ ನಡೆಸದೆ, ವಿಚಾರಣೆಯನ್ನಷ್ಟೇ ಮಾಡಿ ಬಿಟ್ಟಿದ್ದಾರೆ ಎನ್ನುವ ಆಕ್ಷೇಪಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.

ಪ್ರಮುಖ ಆರೋಪಿಗೆ ಶೋಧ

ಮಂಗಳೂರಿಗೆ ಮುಂಬೈಯಿಂದ ಮಾದಕ ವಸ್ತು ರವಾನೆ ಮಾಡುತ್ತಿದ್ದ ಮೂಲತಃ ಬೆಂಗರೆ ನಿವಾಸಿಗೆ ನಗರ ಸಿಸಿಬಿ ಪೊಲೀಸರು ಬಲೆ ಬೀಸಿದ್ದು, ಶೀಘ್ರದಲ್ಲೇ ಪೊಲೀಸರು ಬಂಧಿಸುವ ಸಾಧ್ಯತೆಯಿದೆ. ಈತ ಮುಂಬೈಗೆ ಹೋಗಿ ಅಲ್ಲೇ ವಾಸ್ತವ್ಯ ಹೂಡಿದ್ದ. ಮಂಗಳೂರಿಗೆ ಮಾದಕ ರವಾನೆ ಮಾಡುತ್ತಿರುವ ಪ್ರಮುಖ ಆರೋಪಿಗಳಲ್ಲಿ ಈತ ಒಬ್ಬ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net