ಗಾಂಜಾ ಮಾರಾಟ 12 ಜನರ ಬಂಧನ, ಹುಬ್ಬಳ್ಳಿ ಪೊಲೀಸರ ಕಾರ್ಯಾಚರಣೆ

Screenshot_20240809-204912_1.jpg
Published on

ಹುಬ್ಬಳ್ಳಿ: ಇಲ್ಲಿಯ ತಬೀಬ್ ಲ್ಯಾಂಡ್ ಗ್ರಿಡ್ ಬಳಿ ಗುರುವಾರ ರಾತ್ರಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಗಾಂಜಾ ಮಾರಾಟಗಾರರನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 2.50 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಒಡಿಸ್ಸಾ ಮೂಲದ ಕೇಶಬಚಂದ್ರ, ನೀಲಾಂಬರ ರಾವುತ್, ಉತ್ತರಾಖಂಡದ ಮಹ್ಮದಲಿ, ಹಾವೇರಿಯ ತೌಸಿಫ್ ಅಹ್ಮದ್, ಹುಬ್ಬಳ್ಳಿಯ ಪವನ್, ಸಿದ್ಧಾರ್ಥ, ಮಂಜುನಾಥ, ನದೀಂ, ವಿಠ್ಠಲ, ಶಾನವಾಜ, ಗಣಪತಸಾ, ಕಾರ್ತಿಕ ಸೇರಿ 12 ಜನರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ 2.5 ಕೆಜಿ ಗಾಂಜಾ, 5 ಲಕ್ಷ ಮೌಲ್ಯದ ಕಾರು, ಎರಡು ತಲ್ವಾರ್, ಡ್ರಾಗರ್, 10 ಮೊಬೈಲ್ ಫೋನ್ ಹಾಗೂ ಎರಡು ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.

ಸಿಬ್ಬಂದಿಗೆ ಗಾಯ: ಗಾಂಜಾ ಮಾರಾಟಕ್ಕೆ ಸಂಬಂಧಿಸಿ ಇನ್ನಷ್ಟು ಆರೋಪಿಗಳ ಮಾಹಿತಿ ನೀಡುವುದಾಗಿ ಹೇಳಿದ್ದ ಹೊರ ರಾಜ್ಯದ ಕೇಶಬಚಂದ್ರ ಮತ್ತು ನೀಲಾಂಬರ ಅವರನ್ನು ಕರೆದೊಯ್ದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ತಪ್ಪಿಸಿಕೊಳ್ಳಲು ಯತ್ನಿಸಿದ್ದರು.

ಘರ್ಷಣೆಯಲ್ಲಿ ಪೊಲೀಸ್ ಸಿಬ್ಬಂದಿ ಸುರೇಶ ಮತ್ತು ಲಿಂಗನಗೌಡ ಅವರಿಗೆ ಗಾಯಗಳಾಗಿದ್ದು ಅವರನ್ನು ಕಿಮ್ಸ್ ಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳಾದ ಪವನ್ ಮತ್ತು ಸಿದ್ಧಾರ್ಥ ವಿರುದ್ಧ ನಾಲ್ಕು ಪ್ರತ್ಯೇಕ ಪ್ರಕರಣಗಳು, ಹಾವೇರಿಯ ತೌಸಿಫ್ ಮತ್ತು ಹುಬ್ಬಳ್ಳಿಯ ಮಂಜುನಾಥ ವಿರುದ್ಧ ಪ್ರತ್ಯೇಕ ಎರಡು ಪ್ರಕರಣಗಳು ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಮಹಾರಾಷ್ಟ್ರ ಮತ್ತು ಗುಜರಾತ ಕಡೆಯಿಂದ ಹುಬ್ಬಳ್ಳಿಗೆ ಗಾಂಜಾ ಬರುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಮ್ಮ ತಂಡಗಳನ್ನು ಅಲ್ಲಿಗೆ ಪರಿಶೀಲನೆಗೆ ಕಳುಹಿಸಲಾಗಿದೆ. ಹೊಸ ಆ್ಯಪ್, ಇಂಟರ್ನೆಟ್ ಮೂಲಕ ಸ್ಥಳಿಯರನ್ನು ಸಂಪಕಿರ್ಸಿ ಅವರು ಗಾಂಜಾ ವ್ಯವಹಾರ ನಡೆಸುತ್ತಿದ್ದರು ಎಂದು ಹೇಳಿದರು.

ಧಾರವಾಡದಲ್ಲೂ ಬಂಧನ: ಧಾರವಾಡದ ಕೋಳಿಕೆರೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1.91 ಲಕ್ಷ ಮೌಲ್ಯದ ಗಾಂಜಾ, ಎರಡು ಮೊಬೈಲ್ ಫೋನ್ ಮತ್ತು 1,200 ನಗದು ವಶಪಡಿಸಿಕೊಳ್ಳಲಾಗಿದೆ.
ಸೊಲ್ಲಾಪುರದ ಸೈಫಲಿ ಸುತಾರ್, ಸಂಕೇತ್ ಕೋತ್, ಧಾರವಾಡದ ಸಂದೀಪ ಸಳಕೆ ಮತ್ತು ಹಜರತಲಿ ಮಕಾನದಾರ ಬಂಧಿತರು. ಇನ್ಸ್ ಪೆಕ್ಟರ್ ಎನ್.ಸಿ. ಕಾಡದೇವರಮಠ ನೇತೃತ್ವದ ತಂಡ ಇವರ ವಿರುದ್ಧ ಕಾರ್ಯಾಚರಣೆ ನಡೆಸಿತ್ತು ಎಂದು ಆಯುಕ್ತರು ತಿಳಿಸಿದರು.

ಕಾರು ಚಾಲಕ ಬಂಧನ: ಧಾರವಾಡದ ಮರಾಠಾ ಕಾಲನಿ ಬಳಿ ಎರಡು ದಿನಗಳ ಹಿಂದೆ ಬೈಕ್ ಸವಾರ ರೋಹಿತ್ ಕುಂಬಾರ (20) ಎಂಬುವವರಿಗೆ ಅಪಘಾತ ಪಡಿಸಿ ಪರಾರಿಯಾಗಿದ್ದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಕುಂದಗೋಳ ರಾಮನಕೊಪ್ಪದ ಚಾಲಕ ಮಹಾಂತೇಶ ಕುರಾಡೆ ಎಂಬಾತನನ್ನು ಧಾರವಾಡ ಸಂಚಾರ ಠಾಣೆ ಪೊಲೀಸರು ಬಂಧಿಸಿ, ಬಿಎನ್ಎಸ್ ಕಾಯ್ದೆಯಡಿ ಮಾನವ ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಕೈಗೊಂಡ ಸಂಚಾರ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ನೊಂದವರ ಸಭೆ: ದೂರುದಾರರಿಗೆ ಪ್ರಾಣ ಬೆದರಿಕೆ ಹಾಕಿದ 10 ಮಂದಿ ಆರೋಪಿಗಳ ಮಾಹಿತಿ ಸಂಗ್ರಹಿಸಿ, ಆರು ಜನರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಗುರುವಾರ ಪೋಕ್ಸೊ, ವರದಕ್ಷಿಣೆ ಕಿರುಕುಳ, ಅತ್ಯಾಚಾರ ಮತ್ತು ಎಸ್ಸಿ ಎಸ್ಟಿ ದೌರ್ಜನ್ಯ ಪ್ರಕರಣಗಳ ದೂರುದಾರರ, ನೊಂದವರ ಸಭೆ ನಡೆಸಲಾಗಿದೆ. ಎಲ್ಲ ಪ್ರಕರಣಗಳ ಪ್ರಗತಿ ಪರಿಶೀಲನೆ ನಡೆಸಲಾಗಿದೆ. 171 ಪ್ರಕರಣಗಳಿಗೆ ಸಂಬಂಧಿಸಿ ನೊಂದವರು ಸಭೆಗೆ ಬಂದಿದ್ದು, ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಎಂದರು.

ಪ್ರಕರಣ ಹಿಂಪಡೆಯುವಂತೆ ದೂರುದಾರರಿಗೆ ಪ್ರಾಣ ಬೆದರಿಕೆ ಹಾಕಿದವರ ವಿರುದ್ಧ ಹೆಚ್ಚುವರಿ ಪ್ರಕರಣ ದಾಖಲಿಸಿಕೊಂಡು, ಅವರಿಗೆ ಜಾಮೀನು ನೀಡದಂತೆ ಕೋರ್ಟ್‌ಗೆ ವಿನಂತಿಸಲಾಗುವುದು. ಯಾವುದೇ ಪ್ರಕರಣದ ದೂರುದಾರರು ಭಯಪಡಬಾರದು. ಏನೇ ಇದ್ದರೂ ಠಾಣೆಗೆ ಮಾಹಿತಿ ನೀಡಬೇಕು ಎಂದು ಆಯುಕ್ತರು ವಿನಂತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net