

ಮಂಡ್ಯ: ಯುವ ಸಮುದಾಯ ಮಾದಕ ವಸ್ತುಗಳ ಸೇವನೆ ಮತ್ತು ಬಳಕೆಯಿಂದ ದೂರವಿರಲು ಆರೋಗ್ಯಕರ ಅಭ್ಯಾಸಗಳನ್ನು ರೂಢಿ ಮಾಡಿಕೊಳ್ಳಬೇಕು. ಈ ಬಗ್ಗೆ ವಿದ್ಯಾರ್ಥಿ ಮತ್ತು ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಅಬಕಾರಿ ಅಧಿಕಾರಿ ಡಾ.ನಾಗಶಯನ ತಿಳಿಸಿದರು.
ನಗರದ ಮಾಂಡವ್ಯ ಎಕ್ಸ್‌ಲೆನ್ಸ್ ಪಿಯು ಕಾಲೇಜಿನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಅಬಕಾರಿ ನಿರೀಕ್ಷಕರ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ಅಬಕಾರಿ ಕಾಯ್ದೆ ಮತ್ತು ಮಾದಕ ವಸ್ತುಗಳ ಸಂಬಂಧ ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕ ವಲಯದಲ್ಲಿ ಮಾದಕ ವಸ್ತುಗಳ ಬಳಕೆ, ಮಾರಾಟ ಮತ್ತು ಶೇಖರಣೆಗೆ ಸಂಬಂಧಿಸಿದಂತೆ ಮಾಹಿತಿ ಕಂಡು ಬಂದಲ್ಲಿ ಡ್ರಗ್ ಫ್ರೀ ಕರ್ನಾಟಕ ಆ್ಯಪ್ ಮೂಲಕ ಮಾಹಿತಿ ನೀಡಬಹುದು. ಇಂತಹ ವಿವರ ಕೊಟ್ಟವರನ್ನು ಗೌಪ್ಯವಾಗಿಡಲಾಗುವುದು. ಮಾದಕ ವಸ್ತುಗಳ ಬಳಕೆ, ಮಾರಾಟ, ಶೇಖರಣೆಯಂತಹ ಕೃತ್ಯಗಳಲ್ಲಿ ಭಾಗಿಯಾದವರನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಾದಕ ವಸ್ತುಗಳ ಉತ್ಪತ್ತಿ, ಶೇಖರಣೆ, ಸಾಗಾಣಿಕೆ, ಮಾರಾಟ ಇವುಗಳು ಕಾನೂನಿಗೆ ವಿರುದ್ಧವಾಗಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಅಬಕಾರಿ ಇಲಾಖೆ ಪ್ರಕರಣ ದಾಖಲು ಮಾಡಿ ಕ್ರಮ ತೆಗೆದುಕೊಳ್ಳಲಿದೆ. ಯುವ ನೀತಿ ಪ್ರಕಾರ ಭಾರತದಲ್ಲಿ ಶೇ.60ರಷ್ಟು ಯುವ ಜನಾಂಗವನ್ನು ಹೊಂದಿರುವ ದೇಶವಾಗಿದೆ. ವಿಶ್ವ ನಮ್ಮ ಕಡೆ ತಿರುಗಿ ನೋಡುತ್ತಿರುವುದು ಆಶಾದಾಯಕದ ಭರವಸೆಯ ಬೆಳಕಿನ ದೃಷ್ಟಿ ಬೀಳುತ್ತಿದೆ. ಉತ್ತರ ಭಾರತದಿಂದ ಕೆಲಸ ಮಾಡಲು ಯುವಕರು ದಕ್ಷಿಣ ಭಾರತದ ಕಡೆ ಬರುತ್ತಿದ್ದಾರೆ. ದಕ್ಷಿಣ ಭಾರತದ ಯುವಕರು ಕೆಲಸ ಮಾಡಲು ಹೊರ ದೇಶಗಳಿಗೆ ಹೋಗುತ್ತಿದ್ದಾರೆ ಎಂದು ಎಂದು ಹೇಳಿದರು.
ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಅಬಕಾರಿ ಅಧೀಕ್ಷಕ ಎನ್.ರವೀಶ್, ಉಪ ಅಬಕಾರಿ ಅಧೀಕ್ಷಕ ಸೋಮಶೇಖರ್, ವನಿತಾ, ಕುಮಾರ್, ಉಪ ಪ್ರಾಂಶುಪಾಲ ಪ್ರೊ.ಮಹೇಶ್ ಇತರರಿದ್ದರು.