

ಮಂಗಳೂರು: ನಗರದ ಜನವಸತಿ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಮೂರು ಪ್ರಕರಣದಲ್ಲಿ 9 ಮಂದಿ ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ನಗರದ ಬಂದರು ಮಿಷನ್ ಸ್ಟ್ರೀಟ್ ಹಾಗೂ ಅತ್ತಾವರದ ಮಾರ್ನಮಿಕಟ್ಟೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆಪಾದನೆ ಮೇರೆಗೆ ಪೊಲೀಸರು ದಾಳಿ ನಡೆಸಿ ತೋಟಬೆಂಗ್ರೆ ನಿವಾಸಿ ಅಬ್ದುಲ್ ರೆಹಮಾನ್ ಮತ್ತು ಬಂದರು ನಿವಾಸಿ ಮೊಹಮ್ಮದ್ ಸಾದಿಕ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ 2.275 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ನಗರದ ಮಾರ್ನಮಿಕಟ್ಟೆ ಎಂಬಲ್ಲಿ ಇನೋವಾ ಕಾರಿನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಬಿಜೈ ನಿವಾಸಿ ಮಹಮ್ಮದ್ ತಮೀನ್, ಫಳ್ನೀರ್ ನಿವಾಸಿ ರೋಶನ್ ಯೂಸುಫ್, ಬಂದರು ನಿವಾಸಿ ಮಹಮ್ಮದ್ ಅಪ್ವಾನ್ ಎಂಬುವರನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿಗಳಿಂದ 2.168ಗ್ರಾಂ ಗಾಂಜಾ, 9ಎಂಡಿಎಂಎ ಫಿಲ್ಸ್, 2 ಗ್ರಾಂ ಬ್ರೌನ್‌ಶುಗರ್ ಹಾಗೂ ಇನೋವಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಅತ್ತಾವರದ ಫ್ಲ್ಯಾಟ್ ಒಂದಕ್ಕೆ ದಾಳಿ ಮಾಡಿದ ಪೊಲೀಸರು ಫ್ಯಾಟ್‌ನಲ್ಲಿದ್ದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಬೀದರ್ ಮೂಲದ ಪ್ರಜ್ವಲ್ ಫಿನೆಹಾ ಹಾಗೂ ಬೋಳಾರದ ಮೊಹಮ್ಮದ್ ತಮೀಮ್, ಬಂದರಿನ ಮೊಹಮ್ಮದ್ ಅಬ್ದುಲ್ ಅರ್ಮಾನ್, ಜೆಪ್ಪು ಎಂಬಲ್ಲಿನ ಮೊಹಮ್ಮದ್ ಅಫ್ರಾನ್ ಹಾಗೂ ಮಹಮ್ಮದ್ ರಾಯಿಸ್ ಎಂಬುವರನ್ನು ಬಂಧಿಸಿ, 1ಕೆ.ಜಿ. ಗಾಂಜಾ, 3 ಬೈಕ್ ವಶಪಡಿಸಿಕೊಳ್ಳಲಾಗಿದೆ.
ಒಡಿಶಾದಿಂದ ಸಾಗಾಟ: ಆರೋಪಿಗಳು ಒಡಿಶಾದಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಗಾಂಜಾ ಹಾಗೂ ಇತರ ಮಾದಕ ವಸ್ತುಗಳನ್ನು ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ. ಸುಮಾರು 2 ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳು ಹಾಗೂ ಸುಮಾರು 6 ಲಕ್ಷ ರೂ. ಮೌಲ್ಯದ ವಾಹನಗಳು ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಇಕೋನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.