

ಚಿಕ್ಕಪಡಸಲಗಿ: ಮಾದಕ ವ್ಯಸನದ ಮಾಯಾ ಜಾಲದಲ್ಲಿ ಯುವಲೋಕ ಸಿಲುಕುತ್ತಿದೆ ಎಂದು ಶಿಕ್ಷಕಿ ಸಹನಾ ಹತ್ತಳ್ಳಿ (ಕಲ್ಯಾಣಿ) ವಿಷಾದಿಸಿದರು.
ಗ್ರಾಮದ ಗದುಗಿನ ಜಗದ್ಗುರು ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನಮುಕ್ತ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಅರಿವು ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು, ಅಪ್ರಾಪ್ತ ವಯಸ್ಸಿನ ಮಕ್ಕಳಲ್ಲೂ ಮಾದಕ ಲೋಕದ ಆಕರ್ಷಣೆ ಆವರಿಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದರು.
ಚಿಕ್ಕ ವಯಸ್ಸಿನ ಮಕ್ಕಳು ಇಂದು ಮಾದಕ ಲೋಕದ ಸೆಳೆತಕ್ಕೆ ಒಳಗಾಗಿ ತಮ್ಮದೇ ಆದ ಚಟದ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಇದು ನೋವಿನ ಸಂಗತಿ. ದುಶ್ಚಟಗಳ ವ್ಯಾಮೋಹದ ಜಾಲ ಬಲು ವಿಸ್ತಾರಗೊಳ್ಳುತ್ತಿದೆ. ಇದರಿಂದ ಸಾಮಾಜಿಕ ಆರೋಗ್ಯ, ಶೈಕ್ಷಣಿಕ ಪ್ರಗತಿಗೆ ಭಾಗಶಃ ಹಿನ್ನಡೆಯಾಗುತ್ತಿದೆ. ಮಾದಕ ವಸ್ತುಗಳು ಸಮಾಜಕ್ಕೆ ಪಿಡುಗುಗಳಾಗಿವೆ ಎಂದರು.
ಮುಖ್ಯಶಿಕ್ಷಕ ಬಸವರಾಜ ಜಾಲೋಜಿ ಮಾತನಾಡಿ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಈ ಮಾದಕ ವಸ್ತುಗಳು ಮಾನಸಿಕ ಸ್ಥಿತಿಮಿತಿ ಕುಗ್ಗಿಸಿ ಜೀವನೋತ್ಸಾಹ ಮಂಕಾಗಿಸುತ್ತದೆ ಎಂದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪುರ ಮಾತನಾಡಿ, ವಿದ್ಯಾರ್ಥಿ ಜೀವನವೇ ಸುಂದರ ಘಟ್ಟ. ಬದುಕು ರೂಪಿಸಿಕೊಳ್ಳುವ ಮಹತ್ವದ ಹಂತ. ಹೀಗಾಗಿ ದುಶ್ಚಟಗಳಿಗೆ ಅಂಟಿಕೊಳ್ಳದೆ ಆರೋಗ್ಯ, ಭವಿಷ್ಯ ಕಾಪಾಡಿಕೊಳ್ಳಬೇಕು ಎಂದರು.
ಶಿಕ್ಷಕ ಈರಪ್ಪ ದೇಸಾಯಿ, ಲೋಹಿತ ಮಿರ್ಜಿ, ಶ್ರೀಶೈಲ ಹುಣಶಿಕಟ್ಟಿ, ಶಿಕ್ಷಕಿ ಶೃತಿ ಲಿಗಾಡೆ, ಜಮಖಂಡಿ ಸಿದ್ಧಾರ್ಥ ಬಿ.ಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಇತರರಿದ್ದರು.