ಮಾದಕ ವ್ಯಸನ ಮುಕ್ತ ಕರ್ನಾಟಕ ಅಭಿಯಾನ ಆರಂಭ

Drug addiction free Karnataka campaign launched
Published on

ವಿಜಯಪುರ : ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಎನ್​ಆರ್​ಎಲ್​ಎಂ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳು ಶ್ರಮಿಸಬೇಕು ಎಂದು ಜಿ.ಪಂ. ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ಹೇಳಿದರು.ನಗರದ ಜಿ.ಪಂ. ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ಮಾದಕ ವ್ಯಸನ ಮುಕ್ತ ಕರ್ನಾಟಕ ಕುರಿತು ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ದೀನದಯಾಳ್​ ಅಂತ್ಯೋದಯ ಯೋಜನೆಯಡಿ ವಿವಿಧ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ರಾಜ್ಯಾದ್ಯಂತ ಎರಡು ತಿಂಗಳ ಕಾಲ ಮಾದಕ ವ್ಯಸನ ಮುಕ್ತ ಕರ್ನಾಟಕ ಅಭಿಯಾನ ಆರಂಭಿಸಿದೆ.

ಅಭಿಯಾನದ ಭಾಗವಾಗಿ ಮಾದಕ ವಸ್ತುಗಳ ಬಳಕೆ ತಡೆಗಟ್ಟಲು ಮತ್ತು ಅವುಗಳ ಪರಿಣಾಮಗಳ ಬಗ್ಗೆ ಸಮುದಾಯ ಮಟ್ಟದಲ್ಲಿ ಜಾಗೃತಿ ಮೂಡಿಸಲು ವಿವಿಧ ಇಲಾಖೆ ಅಧಿಕಾರಿಗಳು ಕ್ರಿಯಾಶೀಲತೆಯಿಂದ ಅಭಿಯಾನದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.ರಾಜ್ಯದಲ್ಲಿ ಮಾದಕ ದ್ರವ್ಯ ನಿಯಂತ್ರಣಕ್ಕಾಗಿ ನಿರಂತರ ಜಾಗೃತಿ, ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈಗ ಮತ್ತೊಂದು ಹಂತದ ಅಭಿಯಾನ ಆರಂಭಿಸಿದ್ದು, ಸೆಪ್ಟೆಂಬರ್​ 30 ರವರೆಗೆ ಈ ಅಭಿಯಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮಾದಕ ವ್ಯಸನ ಮುಕ್ತ ಕರ್ನಾಟಕ ಅಭಿಯಾನ ರಾಜ್ಯದಾದ್ಯಂತ ಮಹಿಳಾ ಸ್ವ& ಸಹಾಯ ಗುಂಪುಗಳು ಮತ್ತು ಇತರ ಸಮುದಾಯದೊಂದಿಗೆ ನಡೆಸಲಾಗುತ್ತಿರುವುದು ಮತ್ತೊಂದು ವಿಶೇಷ. ಮಾದಕ ದ್ರವ್ಯ ಬಳಕೆ ಮತ್ತು ವ್ಯಸನದಿಂದ ಉಂಟಾಗುವ ಹಿಂಸೆ, ದೌರ್ಜನ್ಯ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.

ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ ನಿರೂಪಿಸಿದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವಿಶ್ವನಾಥ ಶಹಾಪುರ ಪ್ರತಿಜ್ಞಾ ವಿಧಿ ಬೋಧಿಸಿದರು. ತೋಟಗಾರಿಕೆ ಇಲಾಖೆ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಶಾಲಾ ಶಿಕ್ಷಣ ಇಲಾಖೆ ಪಿಯು ಉಪನಿರ್ದೇಶಕ ಸಿ.ಕೆ. ಹೊಸಮನಿ, ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ಮಹೇಶ ಮಾಳವಾಡಕರ, ಆರೋಗ್ಯ ಇಲಾಖೆ ಪಿ.ಎ. ಹಿರೇಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾವಿತ್ರಿ ಗುಗ್ಗರಿ, ಆಹಾರ ಇಲಾಖೆ ಎಂ.ಎಸ್​. ಅರಕೇರಿ ಮತ್ತಿತರರಿದ್ದರು.

ವಿಜಯಪುರದ ಜಿ.ಪಂ. ಸಭಾಂಗಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾದಕ ವ್ಯಸನ ಮುಕ್ತ ಕರ್ನಾಟಕ ಕುರಿತು ಕರಪತ್ರಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ವಿಜಯಕುಮಾರ ಆಜೂರ, ಶಿವನಗೌಡ ಪಾಟೀಲ, ಸಿ.ಕೆ. ಹೊಸಮನಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net