ಅಹವಾಲು ಸಲ್ಲಿಕೆಗೆ ಮುಳುಗಡೆ ಸಂತ್ರಸ್ತರಿಗೆ ಅವಕಾಶ

minister madhu bangarappa
Published on

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರು ತಮ್ಮ ಅಹವಾಲುಗಳಿದ್ದಲ್ಲಿ ಸಚಿವರು, ಶಾಸಕರು ಅಥವಾ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದಲ್ಲಿ, ಅದನ್ನು ಸಂದರ್ಭೋಚಿತವಾಗಿ ಸುಪ್ರಿಂಕೋರ್ಟ್‌ಗೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಅನೇಕ ದಶಕಗಳಿಂದ ಇತ್ಯರ್ಥಗೊಳ್ಳದೆ ನನೆಗುದಿಗೆ ಬಿದ್ದಿರುವ ಶರಾವತಿ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ ಎಂದರು.

ಈ ಹಿಂದೆ ಸಂತ್ರಸ್ತರ ಭೂಮಿಯನ್ನು ಜಂಟಿ ಸರ್ವೇ ಮಾಡಿ ಡಿನೋಟಿಫಿಕೇಶನ್ ಮಾಡಲಾಗಿತ್ತು. ಆದರೆ ಕೆಲವು ಕಾರಣಗಳಿಂದ ನ್ಯಾಯಾಲಯ ಸದರಿ ಸರ್ವೇಗೆ ತಡೆಯಾಜ್ಞೆ ನೀಡಿತ್ತು. ಪುನಃ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳು ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ವರದಿ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಅದರಂತೆ ಈಗ ಜಿಲ್ಲೆಯಲ್ಲಿನ ಶರಾವತಿ ಸೇರಿ ಎಲ್ಲ ಪ್ರದೇಶಗಳಲ್ಲಿನ ಮುಳುಗಡೆ ಸಂತ್ರಸ್ತರ ಸಾಗುವಳಿ ಭೂಮಿಯ ಜಂಟಿ ಸರ್ವೇ ಮಾಡಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಸರ್ವೇ ಕಾರ್ಯ ಮುಗಿದಿದೆ ಎಂದರು.

ಈಗಾಗಲೇ ನಡೆಸಲಾದ ಶರಾವತಿ ಸಂತ್ರಸ್ತರ ಸಮೀಕ್ಷೆಯು ದಶಕಗಳ ಹಿಂದಿನದಾಗಿದ್ದು, ಅದಕ್ಕೆ ಸಂಬಂಧಿಸಿ ಹಲವು ಆಕ್ಷೇಪಗಳಿವೆ. ಈ ಸಮೀಕ್ಷೆ ಕುರಿತು ಸಾರ್ವಜನಿಕರಲ್ಲಿ ಅನೇಕ ಪ್ರಶ್ನೆಗಳಿದ್ದು, ಅವರ ಎಲ್ಲ ಸಲಹೆ-ಸೂಚನೆಗಳನ್ನು ಸರ್ಕಾರ ಮುಕ್ತವಾಗಿ ಸ್ವೀಕರಿಸಿ, ಪರಿಶೀಲಿಸಲಿದೆ. ಸರ್ಕಾರದ ಮಹತ್ವದ ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net