ತುಂಗಾಭದ್ರಾರತಿ ಮಂಟಪ ಸಂಪೂರ್ಣ ಜಲಾವೃತ

HRR
Published on

ಹರಿಹರ: ಚಿಕ್ಕಮಗಳೂರು ಜಿಲ್ಲೆ ಸೇರಿ ಜಲಾಶಯದ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಭದ್ರಾ ಜಲಾಶಯ ತುಂಬಿದ್ದು, ಮಂಗಳವಾರ ನಾಲ್ಕು ಕ್ರಸ್ಟ್ ಗೇಟ್‌ಗಳನ್ನು ತೆರೆದು ನೀರು ಬಿಟ್ಟಿರುವ ಕಾರಣ ಹರಿಹರ ತಾಲೂಕಿನ ತುಂಗಭದ್ರಾ ನದಿಯಲ್ಲಿ ಹರಿವು ಹೆಚ್ಚಾ ಗುತ್ತಿದೆ.

ನಗರದ ಗಂಗಾನಗರದ 7 ಮನೆಗಳು ತುಂಗಭದ್ರಾ ನೀರಿನಿಂದ ಜಲಾವೃತವಾದ ಹಿನ್ನೆಲೆಯಲ್ಲಿ ನಿವಾಸಿಗಳನ್ನು ಪಕ್ಕದ ಎಪಿಎಂಸಿ ಆವರಣದಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಹಲಸಬಾಳು ಗ್ರಾಮದಲ್ಲಿ ನದಿ ಪಾತ್ರದ ಎರಡು ಮನೆಗಳು ನೀರಿನಲ್ಲಿ ಮುಳುಗುವ ಮುನ್ಸೂಚನೆ ಇರುವ ಕಾರಣ ಗ್ರಾಮದ ಶಾಲೆಗೆ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ತಹಸೀಲ್ದಾರ್ ಗುರು ಬಸವರಾಜ್ ತಿಳಿಸಿದ್ದಾರೆ.

ಸಾರ್ವಜನಿಕರ ದಂಡು: ರಾಘವೇಂದ್ರ ಮಠದ ಹಿಂಭಾಗ ತುಂಗಾಭದ್ರಾರತಿ ಮಂಟಪ ಸಂಪೂರ್ಣ ಜಲಾವೃತಗೊಂಡಿದೆ. ಹರಿಹರದ ನಾಗರಿಕರು ಕುಟುಂಬ ಸಮೇತ ಮೈದುಂಬಿ ಹರಿಯುತ್ತಿರುವ ನದಿಯನ್ನು ಎರಡು ಸೇತುವೆಗಳ ಮೇಲೆ ನಿಂತು ವೀಕ್ಷಿಸುತ4್ತರುವ ದೃಶ್ಯ ಕಂಡು ಬಂತು.

ತಾಲೂಕು ಆಡಳಿತ, ನಗರಸಭೆ ಅಧಿಕಾರಿಗಳು ಮುಳುಗಡೆಯಾದ ಪ್ರದೇಶದಲ್ಲಿ ಬೀಡು ಬಿಟ್ಟಿದ್ದು, ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶದ ಮಾಹಿತಿಯನ್ನು ನಗರಸಭೆ ವಾಹನದ ದ್ವನಿವರ್ದಕದ ಮೂಲಕ ನೀಡುತ್ತಿದ್ದಾರೆ.

ನದಿಯ ಎರಡೂ ಸೇತುವೆಗಳ ಮೇಲಿರುವ ನೀರಿನ ಪೈಪ್‌ಗಳ ಮೇಲೆ ನಿಂತು ಪೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವ ದೃಶ್ಯ ಸಮಾನ್ಯವಾಗಿತ್ತು. ಪಾನಿಪುರಿ, ಜ್ಯೂಸ್, ಕಡ್ಲೆಕಾಯಿ, ಸೌತೆಕಾಯಿ ಹೀಗೆ ವಿವಿಧ ರೀತಿಯ ಬೀದಿ ವ್ಯಾಪಾರ ಜೋರಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net