

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ಕೋಡಿಂಗೇರಿ ಹಾಗೂ ಬಂಟ್ವಾಳ ತಾಲೂಕು ಬರಿಮಾರಿನಲ್ಲಿ ಗುರುವಾರ ಸಂಭವಿಸಿದ ಎರಡು ಪ್ರತ್ಯೇಕ ಘಟನೆಯಲ್ಲಿ ಒಟ್ಟು ಮೂವರು ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಕೋಡಿಂಗೇರಿ ಬಳಿ ತೋಟದ ಬದಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಕಾಲುಜಾರಿ ನದಿನೀರಿಗೆ ಬಿದ್ದು ಮೂಡುಬಿದಿರೆ ಶಿರ್ತಾಡಿ ಗ್ರಾಮದ ಮೂಡುಕೋಣಾಜೆ ಕೋಣಂಜ ಸದಾನಂದ ಪೂಜಾರಿ ಅವರ ಪುತ್ರ ಈಶಾನ್(9) ಹಾಗೂ ಮೂಡುಬಿದಿರೆ ಪಣಪಿಲ ಗ್ರಾಮದ ದರ್ಖಾಸುಮನೆ ಮಹಾಬಲ ಪೂಜಾರಿ ಅವರ ಪುತ್ರ ವಾಸುದೇವ(22) ಮೃತಪಟ್ಟಿದ್ದರೆ, ಬಂಟ್ವಾಳ ತಾಲೂಕು ಬರಿಮಾರಿನಲ್ಲಿ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲು ಸ್ನೇಹಿತರೊಂದಿಗೆ ತೆರಳಿದ್ದ ಮಾಣಿ ಕರ್ನಾಟಕ ಪ್ರೌಢಶಾಲೆ ಸಮೀಪ ಪಳಿಕೆ ನಿವಾಸಿ ಮಹಮ್ಮದ್ ಎಂಬುವರ ಪುತ್ರ ಅಬ್ದುಲ್ ರಹಮಾನ್ ನೀರುಪಾಲಾಗಿದ್ದಾನೆ
ಸಂಬಂಧಿಕರ ಮನೆಗೆ ಬಂದಿದ್ದಾಗ ದುರಂತ
ಕೋಡಿಂಗೇರಿ ಗ್ರಾಮದಲ್ಲಿ ಕಾಲು ಜಾರಿ ಹೊಳೆಗೆ ಬಿದ್ದು ಮೃತಪಟ್ಟ ಈಶಾನ್ ಶಿರ್ತಾಡಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ಕಲಿಯುತ್ತಿದ್ದು, ವಾಸುದೇವ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಇವರಿಬ್ಬರು ಹತ್ತಿರದ ಸಂಬಂಧಿಯಾಗಿದ್ದು, ಹೊಸಂಗಡಿ ಗ್ರಾಮದ ಕೋಡಿಂಗೇರಿಯ ಸಂಬಂಧಿಕರ ಮನೆಗೆ ಬಂದಿದ್ದರು. ಗುರುವಾರ ಮನೆ ಸಮೀಪದ ಅಡಕೆ ತೋಟದಲ್ಲಿ ಮನೆಮಂದಿ ಹುಲ್ಲು ಕೊಯ್ಯಲೆಂದು ಬಂದಿದ್ದರು. ಈಶಾನ್ ಹಾಗೂ ವಾಸುದೇವ ತೋಟದ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಈಶಾನ್ ಕಾಲುಜಾರಿ ನದಿ ನೀರಿಗೆ ಬಿದ್ದಿದ್ದಾನೆ. ತಕ್ಷಣ ವಾಸುದೇವ ಅವರು ಬಾಲಕನನ್ನು ರಕ್ಷಿಸಲೆಂದು ನೀರಿಗೆ ಹಾರಿದ್ದು, ಈಜು ಬರಲಾರದೆ ನೀರಿನಲ್ಲಿ ಮುಳುಗಲಾರಂಭಿಸಿದ್ದಾರೆ. ಇವರ ಬೊಬ್ಬೆ ಕೇಳಿ ಮನೆಮಂದಿ ಓಡಿ ಬರುವಷ್ಟರಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ.
ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೂಡುಬಿದಿರೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ನೇಹಿತರೊಂದಿಗೆ ಈಜಲು ತೆರಳಿದ್ದ
ಬಂಟ್ವಾಳದ ಬರಿಮಾರು ಕಡವಿನಬಾಗಿಲು ಎಂಬಲ್ಲಿ ಮಧ್ಯಾಹ್ನದ ಬಳಿಕ ರಹಿಮಾನ್ ಅವರು ತನ್ನ ಸ್ನೇಹಿತರಾದ ಸಮಾದ್, ಮುಸ್ತಫಾ ಮತ್ತು ಸಮಾದ್ ಜತೆ ನೇತ್ರಾವತಿ ನದಿ ನೀರಲ್ಲಿ ಈಜಲು ತೆರಳಿದ್ದರು. ಆದರೆ 4 ಗಂಟೆಯ ವೇಳೆಗೆ ನೀರಿನಲ್ಲಿ ಈಜಾಡುತ್ತಿದ್ದ ರಹಿಮಾನ್ ಆಕಸ್ಮಾತ್ತಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ಈಜುಗಾರರು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ. 5.30ರ ವೇಳೆಗೆ ರಹಮಾನ್ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದ್ದು, ಈಜುಗಾರರು ನದಿಯಿಂದ ಮೇಲಕ್ಕೆತ್ತಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.