ಕೂಲಿ ಕಾರ್ಮಿಕರು ಉದ್ಯೋಗ ನೀಡಿ ವಲಸೆ ತಪ್ಪಿಸಿ: ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ ಪ್ರಕಾಶ್ ಸೂಚನೆ

Drought situation review meeting
Published on

ಮಂಡ್ಯ: ಬರ ಪರಿಸ್ಥಿತಿ ಹಿನ್ನಲೆ ಜನರಿಗೆ ಸ್ಥಳೀಯವಾಗಿ ಮನರೇಗಾ ಹಾಗೂ ಇನ್ನಿತರ ಯೋಜನೆಯಡಿ ಕೆಲಸ ನೀಡುವ ಮೂಲಕ ಕೂಲಿ ಕಾರ್ಮಿಕರು ವಲಸೆ ಹೋಗದಂತೆ ನೋಡಿಕೊಳ್ಳಿ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬರ ಪರಿಸ್ಥಿತಿ ಅವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬರಗಾಲ ಬಂದಾಗ ಕೃಷಿಕರು ಹಾಗೂ ಸಾರ್ವಜನಿಕರು ದುಡಿಯುವುದಕ್ಕೆ ಊರು ಬಿಟ್ಟು ಹೋಗುತ್ತಾರೆ. ಹಾಗಾಗಿ ಅಂತಹ ಜನರು ವಲಸೆ ಹೋಗುವುದನ್ನು ತಡೆಯಿರಿ. ಸ್ಥಳೀಯವಾಗಿ ಅವರಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಿ. ಕೃಷಿ ಹೊಂಡ, ಹೂಳು ಎತ್ತುವುದು ಸೇರಿದಂತೆ ಇನ್ನಿತರ ಕೆಲಸ ನೀಡಿ ಎಂದರು.

ಗ್ರಾಮ ಪಂಚಾಯತಿಯಲ್ಲಿ ಮನರೇಗಾ ಯೋಜನೆಯಡಿ ಕೆಲಸಕ್ಕಾಗಿ ಮನವಿ ಸಲ್ಲಿಸುವವರಿಗೆ ಆದ್ಯತೆ ಮೇಲೆ ಹಾಗೂ ವಯೋಮಾನ ಆಧಾರಿಸಿ ಅವರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿ. ನರೇಗಾ ಯೋಜನೆಯಡಿ ದಿನಗೂಲಿ 316 ರೂ ನೀಡುತ್ತಾರೆ. ಅದನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ಬಳಕೆ ಮಾಡಿರಿ. ಹೆಚ್ಚುವರಿ ಕೆಲಸ ಬೇಕಿದ್ದರೆ ಮಾಹಿತಿ ನೀಡಿ. ರಂಗನತಿಟ್ಟು ಸೇರಿದಂತೆ ಪ್ರವಾಸೋದ್ಯಮ ಸ್ಥಳದಲ್ಲಿ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಿ. ಗಿಡಕ್ಕೆ ನೀರು ಹಾಕುವುದು. ಅಲ್ಲಿಯ ಪರಿಸರ ನೋಡಿಕೊಳ್ಳುವುದು, ಹೀಗೆ ಅಧಿಕಾರಿಗಳು ಚಿಂತಿಸಿ ಕೂಲಿ-ಕಾರ್ಮಿಕರಿಗೆ ಉದ್ಯೋಗ ನೀಡಿ. ಬರ ಪರಿಸ್ಥಿತಿ ನಿರ್ವಹಣೆಯ ನೋಡಲ್ ಅಧಿಕಾರಿಗಳು ಪ್ರತಿ ಗ್ರಾಮಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿ. ಪಂಚಾಯಿತಿ ಅಧಿಕಾರಿಗಳಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿರಿ ಎಂದು ತಿಳಿಸಿದರು.

ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲಿ. ಬರ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಸರ್ಕಾರದ ಯೋಜನೆಗಳು ಕೂಡ ನೆರವಾಗಲಿವೆ. ಗೃಹಲಕ್ಷ್ಮೀ ಯೋಜನೆಯ ಹಣ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು. ಪ್ರತಿ ಮಾಹೆ ಡಿ.ಬಿ.ಟಿ ಮುಖೇನ ಹಣ ಸಂದಾಯವಾಗುತ್ತಿದೆಯಾ ಎಂದು ಖಾತರಿ ಮಾಡಿಕೊಳ್ಳಿ. ಜತೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ. ಪ್ರಮುಖವಾಗಿ ಕುಡಿಯುವ ನೀರಿನ ತೊಂದರೆ ಉಂಟಾಗಬಹುದಾದ ಗ್ರಾಮಗಳ ಪಟ್ಟಿ ಮಾಡುವುದರ ಜತೆಗೆ ನೀರು ದೊರೆಯುವ ಮೂಲಗಳನ್ನು ಪತ್ತೆ ಮಾಡಿಕೊಳ್ಳಿ. ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಯ ಏಳು ತಾಲೂಕು ಬರ ಎಂದು ಘೋಷಣೆಯಾಗಿದೆ. ಆದ್ದರಿಂದ ಎಲ್ಲ ನೋಡಲ್ ಅಧಿಕಾರಿಗಳು ರೈತರ ಹಿತ ಕಾಯುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಿ. ಜಿಲ್ಲೆ, ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ನೋಡಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಬರ ನಿರ್ವಹಣೆಯನ್ನು ಎದುರಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net