ಬರ ಪರಿಸ್ಥಿತಿ ಪರಿಶೀಲನೆಗೆ ಮಿಶ್ರ ಪ್ರತಿಕ್ರಿಯೆ

Drought situation check
Drought situation check rural district
Published on

ತರಾತುರಿ ಅಧ್ಯಯನಕ್ಕೆ ಆಕ್ಷೇಪಬೆವರು ಹರಿಸಿದ ಅಧಿಕಾರಿಗಳು

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಭಾನುವಾರ ಬರ ಪರಿಸ್ಥಿತಿ ಪರಿಶೀಲನೆ ನಡೆಸಿದ ಕೇಂದ್ರ ಜಲ ಆಯೋಗದ ನಿರ್ದೇಶಕರ ನೇತೃತ್ವದ ಅಧಿಕಾರಿಗಳ ತಂಡದ ಕಾರ್ಯವೈಖರಿ ಬಗ್ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲೆಯ ನಾಲ್ಕೂ ತಾಲೂಕುಗಳು ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿವೆ. ಆದರೆ ಪರಿಶೀಲನೆ ವೇಳೆ ಹೊಸಕೋಟೆ ಭೇಟಿ ರದ್ದಾಗಿದೆ. ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲೂಕಿನಲ್ಲಿ ಪರಿಶೀಲನೆ ನಡೆಸಿದ ತಂಡ ಟಿಪ್ಪಣಿಯೊಂದಿಗೆ ಮರಳಿದೆ, ಇದು ಕೆಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದರೆ ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿರುವ ಬರ ಪರಿಸ್ಥಿತಿ ವರದಿಯನ್ನು ಕೇಂದ್ರ ತಂಡ ಎಷ್ಟರ ಮಟ್ಟಿಗೆ ಪರಿಗಣಿಸಲಿದೆ, ಕೇಂದ್ರಕ್ಕೆ ವಾಸ್ತವ ಪರಿಸ್ಥಿತಿಯನ್ನು ನ್ಯಾಯಯುತವಾಗಿ ತಲುಪಿಸಲಿದೆಯೇ ಎಂಬ ಆತಂಕ ಮೂಡುವಂತೆ ಮಾಡಿದೆ.
30ಕ್ಕೂ ಹೆಚ್ಚು ವಾಹನಗಳು:
ಬೆಳಗ್ಗೆ 11 ಗಂಟೆ ಸುಮಾರಿಗೆ ಜಿಲ್ಲಾಡಳಿತದ ವಿವಿಧ ಇಲಾಖೆಯ 60ಕ್ಕೂ ಹೆಚ್ಚು ಅಧಿಕಾರಿಗಳು 30ಕ್ಕೂ ಹೆಚ್ಚು ವಾಹನಗಳಲ್ಲಿ ಕೇಂದ್ರ ತಂಡದೊಂದಿಗೆ ಪರಿಶೀಲನೆ ಆರಂಭಿಸಿದರು. ಮೊದಲಿಗೆ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ, ಬ್ಯಾಡರಹಳ್ಳಿ, ಆವತಿ ನಂತರ ದೊಡ್ಡಬಳ್ಳಾಪುರ ತಾಲೂಕಿನ ಓಬದೇನಹಳ್ಳಿ, ಕೊಳೂರು, ಹೊನ್ನಘಟ್ಟ ಗ್ರಾಮದ ಬಳಿಕ ನೆಲಮಂಗಲ ತಾಲೂಕಿನ ನಸೀರಗಾನಹಳ್ಳಿ ಹಾಗೂ ಕುಲುವೇನಹಳ್ಳಿಗಳಲ್ಲಿ ಬೆಳೆಹಾನಿ, ಬರ ಪರಿಸ್ಥಿತಿ ಅವಲೋಕಿಸಲಾಯಿತು. ಬೆಳಗ್ಗೆ 11 ಗಂಟೆಗೆ ಆರಂಭವಾದ ಪರಿಶೀಲನೆ ಮಧ್ಯಾಹ್ನ 2.30ರ ಹೊತ್ತಿಗೆ ಮುಕ್ತಾಯವಾಯಿತು. ಮೂರು ತಾಲೂಕುಗಳ ಅಷ್ಟೂ ಗ್ರಾಮಗಳ ಜಮೀನುಗಳಲ್ಲಿ ತರಾತುರಿಯಲ್ಲಿ ಬೆಳೆ ಪರಿಶೀಲನೆ, ರೈತರಿಂದ ಪ್ರತ್ಯಕ್ಷ ಮಾಹಿತಿ ಪಡೆಯುವ ಕಸರತ್ತು ನಡೆಯಿತು. ಕೇವಲ ಮೂರೂವರೆ ಗಂಟೆಯೊಳಗೆ ಪರಿಶೀಲನೆ ಮುಕ್ತಾಯಗೊಂಡಿತು. ಕೆಲವು ಕಡೆಗಳಲ್ಲಿ ರೈತರ ಕಷ್ಟ ಆಲಿಸಿದ ಅಧಿಕಾರಿಗಳ ತಂಡ ಮುಂದಕ್ಕೆ ತೆರಳಿತು. ಬರ ಪರಿಸ್ಥಿತಿ ನೈಜ ಚಿತ್ರಣ ದರ್ಶನ ಮಾಡುವಲ್ಲಿ ಅಧಿಕಾರಿಗಳು ಆತುರ ತೋರಿದರು ಎಂದು ಕೆಲವು ರೈತರು ಬೇಸರ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡುಬಂತು.

ಅಧಿಕಾರಿಗಳ ರನ್ನಿಂಗ್ ರೇಸ್! ಕೇಂದ್ರ ತಂಡದ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ನಡೆ ರನ್ನಿಂಗ್ ರೇಸ್‌ನಂತಿತ್ತು. ಮುಂದೆ ಸಾಲಿನಲ್ಲಿ ತೆರಳುತ್ತಿದ್ದ ಕೇಂದ್ರ ತಂಡದ ಅಧಿಕಾರಿಗಳ ವಾಹನ ಹಾಗೂ ಡಿಸಿ, ಸಿಇಒ ವಾಹನಗಳನ್ನು ಹಿಂಬಾಲಿಸುತ್ತಿದ್ದ ಇನ್ನಿತರ ಇಲಾಖಾ ಅಧಿಕಾರಿಗಳ ತಂಡ ಪರಿಶೀಲನೆ ಸ್ಥಳಕ್ಕೆ ತೆರಳಲು ಅವಕಾಶವಿಲ್ಲದಂತಹ ಪರಿಸ್ಥಿತಿ ಎದುರಾಗಿತ್ತು. ಹಿಂದಿನ ವಾಹನಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವುದರೊಳಗೆ ಕೇಂದ್ರ ತಂಡ ವಾಪಸ್ ವಾಹನದಲ್ಲಿ ಆಸೀನರಾಗುತ್ತಿದ್ದರು. ಇದರಿಂದ ಸ್ಥಳದಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಯಿತು.
ಬೆವರು ಹರಿಸಿದ ಅಧಿಕಾರಿಗಳು: ಕೇಂದ್ರ ತಂಡಕ್ಕೆ ಬರ ಪರಿಸ್ಥಿತಿ ಮನವರಿಕೆ ಮಾಡುಕೊಡುವಲ್ಲಿ ಜಿಲ್ಲಾಡಳಿತ ಅಧಿಕಾರಿಗಳು ಬೆವರು ಹರಿಸಿದರು. ಅದರಲ್ಲೂ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಕ್ರಿಯಾಶೀಲತೆಯಿಂದ ಪ್ರತಿ ಸ್ಥಳದಲ್ಲೂ ವಾಸ್ತವ ಪರಿಸ್ಥಿತಿಯನ್ನು ದರ್ಶನ ಮಾಡಿಸುತ್ತಿದ್ದ ದೃಶ್ಯ ಕಂಡುಬಂತು.

ಜಿಲ್ಲೆಯಲ್ಲಿ 49,559 ಹೆಕ್ಟೇರ್ ಬೆಳೆಹಾನಿ
ಜಿಲ್ಲೆಯಲ್ಲಿ ಮಳೆ ಕೊರತೆಯಿಂದ 49,559 ಹೆಕ್ಟೇರ್ ಬೆಳೆಹಾನಿಯಾಗಿದೆ. ಈ ಕುರಿತು ಸಮಗ್ರ ಮಾಹಿತಿ ಹಾಗೂ ಛಾಯಾಚಿತ್ರಗಳ ಮೂಲಕ ಪ್ರಾತ್ಯಕ್ಷಿಕೆ ನೀಡಲಾಗಿದೆ. ವಾಸ್ತವದಲ್ಲಿ ಕೃಷಿ ಹಾಗೂ ತೋಟಗಾರಿಕೆ ಸೇರಿ ಅಪಾರ ಬೆಳೆ ಹಾನಿಯಾಗಿದೆ. ರಾಗಿ 4,60,003 ಹೆಕ್ಟೇರ್, ಮುಸುಕಿನ ಜೋಳ 3,477 ಹೆಕ್ಟೇರ್, ತೊಗರಿ 68.95 ಹೆಕ್ಟೇರ್ ನೆಲಗಡಲೆ 9.50 ಹೆಕ್ಟೇರ್‌ನಲ್ಲಿ ಹಾನಿಯಾಗಿರುವ ಬಗ್ಗೆ ಜಿಲ್ಲಾಡಳಿತ ವರದಿ ಸಲ್ಲಿಸಿದೆ.

ಅಧಿಕಾರಿಗಳ ತಂಡದಿಂದ ಪರಿಶೀಲನೆ: ಕೇಂದ್ರ ಜಲ ಆಯೋಗದ ನಿರ್ದೇಶಕ ವಿ.ಅಶೋಕ್‌ಕುಮಾರ್, ಎಂಎನ್‌ಸಿಎ್ಸಿ ಉಪನಿರ್ದೇಶಕ ಕರಣ್ ಚೌಧರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧೀನ ಕಾರ್ಯದರ್ಶಿ ಸಂಗೀತ್ ಕುಮಾರ್, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರ ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ ತಂಡ ಪರಿಶೀಲನೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net