ಬರ ಪರಿಹಾರ | ನನ್ನ ಹೇಳಿಕೆ ಸುಳ್ಳಾದರೆ ರಾಜೀನಾಮೆ ನೀಡಲು ಸಿದ್ಧ : ಸಿದ್ದರಾಮಯ್ಯ

mysore
Published on

ಮೈಸೂರು: ಬರಪರಿಹಾರ ವಿಚಾರವಾಗಿ ನಾನು ನೀಡಿರುವ ಹೇಳಿಕೆ ಸುಳ್ಳಾದರೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ, ಅದೇ ರೀತಿ ಕೇಂದ್ರ ಗೃಹ ಸಚಿವ ಅಮಿತ್ ಷಾ ನೀಡಿರುವ ಹೇಳಿಕೆ ಸುಳ್ಳಾದರೆ ಅವರು ರಾಜೀನಾಮೆ ನೀಡಲು ಸಿದ್ಧರಿದ್ದಾರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ನಗರದ ಶ್ರೀ ಸುತ್ತೂರು ಮಠಕ್ಕೆ ಬುಧವಾರ ಭೇಟಿ ನೀಡಿ ಸುತ್ತೂರು ಶ್ರೀಗಳ ಆಶೀರ್ವಾದ ಪಡೆದು ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ 2023ರ ಸೆ.23 ರಂದು ಮೊದಲ ಮನವಿಯನ್ನು ಸಲ್ಲಿಸಿತು. ಅಕ್ಟೋಬರ್‌ನಲ್ಲಿ ರಾಜ್ಯಕ್ಕೆ ಕೇಂದ್ರ ಅಧ್ಯಯನ ತಂಡ ಆಗಮಿಸಿ ಅಧ್ಯಯನ ನಡೆಸಿ ಅ.20ಕ್ಕೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆ ನಂತರ ಡಿ.19ಕ್ಕೆ ಪ್ರಧಾನಿ ನರೇಂದ್ರ ಮೋದಿ, 20ಕ್ಕೆ ಅಮಿತ್ ಷಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಡಿಸೆಂಬರ್ ಕಳೆದು 4 ತಿಂಗಳು ಕಳೆದರೂ ಪರಿಹಾರ ನೀಡಿಲ್ಲ. 6 ತಿಂಗಳ ಹಿಂದೆಯೇ ನಾವು ಮನವಿ ಪತ್ರ ನೀಡಿದ್ದೇವೆ. ಆರು ತಿಂಗಳಿನಿಂದ ಪರಿಹಾರ ನೀಡಿಲ್ಲ ಎಂದರೆ ಇವರಿಗೆ ಮಾತನಾಡಲು ಯಾವ ನೈತಿಕತೆ ಇದೆ. ಕೇಂದ್ರ ಗೃಹ ಸಚಿವರು ಈ ರೀತಿ ಸುಳ್ಳು ಹೇಳುವುದು ಸರಿಯಾ? ನಾವು ಸುಳ್ಳು ಹೇಳುವ ಅವಶ್ಯಕತೆ ಇಲ್ಲ ಎಂದರು.

ನಾವು ಯಾವಾಗ ಮನವಿ ಪತ್ರ ಸಲ್ಲಿಸಿದೆವು, ಕೇಂದ್ರ ಅಧ್ಯಯನ ತಂಡ ಯಾವಾಗ ರಾಜ್ಯಕ್ಕೆ ಆಗಮಿಸಿ ಕೇಂದ್ರಕ್ಕೆ ವರದಿ ಸಲ್ಲಿಸಿತು ಎಂಬ ಸಂಪೂರ್ಣ ವಿವರವನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದೇವೆ. ಇಷ್ಟೆಲ್ಲ ಸತ್ಯಾಂಶ ಇಲ್ಲದೆ ಇದ್ದರೆ ನಾವು ನ್ಯಾಯಾಲಯಕ್ಕೆ ಹೋಗಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದ ಸಂದರ್ಭ ಡಿ.23ಕ್ಕೆ ಸಭೆ ಕರೆದಿದ್ದೇವೆ, ಅಂದೇ ಬರಪರಿಹಾರ ನೀಡುವ ವಿಚಾರವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ನರೇಂದ್ರ ಮೋದಿ ಹಾಗೂ ಅಮಿತ್ ಷಾ ಭರವಸೆ ನೀಡಿದ್ದರು. ಆದರೆ, ಅವರು ಕೊಟ್ಟ ಭರವಸೆ ಈಡೇರಿಸಿಲ್ಲ. ನಿಯಮದ ಪ್ರಕಾರ ಎನ್‌ಡಿಆರ್‌ಎಫ್ ಹಣವನ್ನು ಕೇಂದ್ರ ಸರ್ಕಾರ ನೀಡಲೇ ಬೇಕು, ಅದು ಕೇಂದ್ರ ಸರ್ಕಾರದ ಕರ್ತವ್ಯ. ಎನ್‌ಡಿಆರ್‌ಎಫ್ ಕೇಂದ್ರ ಸರ್ಕಾರದ ಹಣವೇನು ಅಲ್ಲ, ಎಲ್ಲ ರಾಜ್ಯಗಳ ಹಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net