

ವಿಕ್ರಮ ನಾಡಿಗೇರ ಧಾರವಾಡ
ಬರದಿಂದ ತತ್ತರಿಸಿರುವ ರೈತರ ಜೀವನಾಡಿಯಾದ ಜಾನುವಾರುಗಳ ರಕ್ಷಣೆ ಜವಾಬ್ದಾರಿ ಹೊತ್ತ ಇಲಾಖೆಯಲ್ಲೇ ನೌಕರರ ಬರ ಎದುರಾಗಿದೆ. ಪಶುಗಳ ಆರೋಗ್ಯ ಕಾಪಾಡಬೇಕಾದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಅರ್ಧಕ್ಕರ್ಧ ಹುದ್ದೆಗಳು ಖಾಲಿ ಇರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಇಲಾಖೆಗೆ ಜಿಲ್ಲೆಯಲ್ಲಿ ಸರ್ಕಾರ ಮಂಜೂರು ಮಾಡಿರುವ 448 ಹುದ್ದೆಗಳ ಪೈಕಿ 206 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 242 ಹುದ್ದೆಗಳು ಖಾಲಿ ಇವೆ. ಲಸಿಕೆ ಅಭಿಯಾನ, ಸಭೆಗಳಿಗೆ ಹಾಜರಾಗಿ ಜನಪ್ರತಿನಿಧಿಗಳಿಗೆ ಮಾಹಿತಿ ಒದಗಿಸುವುದು, ಆಕಸ್ಮಿಕವಾಗಿ ಜಾನುವಾರು ಮೃತಪಟ್ಟರೆ ಮಹಜರ್ ನಡೆಸಿ ವರದಿ ನೀಡುವುದು ಸೇರಿ ವಿಮೆ ದೃಢೀಕರಣ ಕೆಲಸವನ್ನು ವೈದ್ಯರು ಮಾಡಬೇಕಿದೆ. ಆದರೆ ಆ ಹುದ್ದೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇರುವುದರಿಂದ ಕಾಯಿಲೆಗಳ ನಿಯಂತ್ರಣ ಸವಾಲಿನ ಕೆಲಸವಾಗಿದೆ.
ಜಿಲ್ಲೆಯಲ್ಲಿ ಅಂದಾಜು 2.30 ಲಕ್ಷ ಜಾನುವಾರುಗಳ ಆರೋಗ್ಯದ ಹೊಣೆ ಇಲಾಖೆಯದ್ದಾಗಿದೆ. ಪಶುಪಾಲನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಅಡಿ 1 ಉಪನಿರ್ದೇಶಕ (ಆಡಳಿತ), 1 ಪಾಲಿಕ್ಲಿನಿಕ್, 11 ಪಶು ಆಸ್ಪತ್ರೆ, 54 ಪಶು ಚಿಕಿತ್ಸಾಲಯ, 42 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಹಾಗೂ 5 ಸಂಚಾರಿ ಪಶುಚಿಕಿತ್ಸಾಲಯಗಳಿವೆ. ಈ ಕಚೇರಿಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ಇದರಿಂದ ಇಲಾಖೆ ಯೋಜನೆಗಳ ಅನುಷ್ಠಾನಕ್ಕೂ ಅಡ್ಡಿಯಾಗಿದೆ. ಇರುವ ಸಿಬ್ಬಂದಿಯೇ ಎಲ್ಲ ಕಾರ್ಯ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಎ.ಬಿ.ಸಿ. ಡಿ ದರ್ಜೆಯಲ್ಲಿ ಮಂಜೂರಾದ 448 ಹುದ್ದೆಗಳ ಪೈಕಿ 206 ಹುದ್ದೆಗಳಷ್ಟೇ ಭರ್ತಿಯಾಗಿದ್ದು, 242 ಹುದ್ದೆಗಳು ಖಾಲಿ ಇವೆ. ಈ ಪೈಕಿ ಎ ದರ್ಜೆಯ 78 ಹುದ್ದೆಗಳಲ್ಲಿ 29 ಖಾಲಿಯಿದ್ದರೆ, ಸಿ ದರ್ಜೆಯ 191 ಹುದ್ದೆಗಳಲ್ಲಿ 87, ಡಿ ದರ್ಜೆಯಲ್ಲಿ 168 ಹುದ್ದೆಗಳಲ್ಲಿ 122 ಹುದ್ದೆಗಳು ಖಾಲಿ ಇವೆ. ಕೆಲ ವರ್ಷಗಳ ಹಿಂದಷ್ಟೇ ಕಾರ್ಯಾರಂಭ ಮಾಡಿರುವ ಪಾಲಿಕ್ಲಿನಿಕ್‌ಗೆ ಮಂಜೂರಾದ 4 ಹುದ್ದೆಗಳೂ ಖಾಲಿ ಇವೆ.
ಜಿಲ್ಲೆಯಲ್ಲಿ ಮುಖ್ಯ ಪಶುವೈದ್ಯಾಕಾರಿ (ವಿಸ್ತರಣೆ)-4, ಮುಖ್ಯ ಪಶುವೈದ್ಯಾಕಾರಿಗಳು (ಆಸ್ಪತ್ರೆ)3, ಮುಖ್ಯ ಅಥವಾ ಹಿರಿಯ ಪಶುವೈದ್ಯಾಧಿಕಾರಿಗಳು 4, ಹಿರಿಯ/ಪಶು ವೈದ್ಯಾಧಿಕಾರಿ 20, ಜಾನುವಾರು ಅಧಿಕಾರಿಗಳು 3, ಹಿರಿಯ ಪಶುವೈದ್ಯಕೀಯ ಪರೀಕ್ಷಕರು 21, ಪಶುವೈದ್ಯಕೀಯ ಪರೀಕ್ಷಕರು 22, ಕಿರಿಯ ಪಶುವೈದ್ಯಕೀಯ ಪರೀಕ್ಷಕರು 33, ವಾಹನ ಚಾಲಕರು 5, ಬೆರಳಚ್ಚುಗಾರರು 1, ದ್ವಿತೀಯ ದರ್ಜೆ ಸಹಾಯಕರು 1 ಹುದ್ದೆಗಳು ಸೇರಿ ಒಟ್ಟು 242 ಹುದ್ದೆಗಳ ದಶಕಗಳಿಂದಲೇ ಭರ್ತಿಯಾಗದೇ ಹಾಗೇ ಉಳಿದಿವೆ.
ವೈದ್ಯಾಧಿಕಾರಗಳ ಬರ: ಜಿಲ್ಲೆಯಲ್ಲಿ ಮಂಜೂರಾತಿಯಾದ 75 ಮುಖ್ಯ/ಹಿರಿಯ ಪಶುವೈದ್ಯಾಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಧಾರವಾಡ ತಾಲೂಕಿನ 19 ಹುದ್ದೆಗಳಲ್ಲಿ 5, ಹುಬ್ಬಳ್ಳಿ ತಾಲೂಕಿನಲ್ಲಿ 19ರಲ್ಲಿ 2, ಕಲಘಟಗಿಯಲ್ಲಿ 14ರಲ್ಲಿ 7, ಕುಂದಗೋಳದಲ್ಲಿ 12ರಲ್ಲಿ 9, ನವಲಗುಂದದಲ್ಲಿ 8ರಲ್ಲಿ 5 ಭರ್ತಿಯಾಗದೇ ಖಾಲಿ ಉಳಿದಿವೆ. ಇದಲ್ಲದೆ ಅಣ್ಣಿಗೇರಿಗೆ ಮಂಜೂರಾದ 3 ಹಾಗೂ ಅಳ್ನಾವರಕ್ಕೆ ಮಂಜೂರಾದ 1 ಹುದ್ದೆ ಸಹ ಭರ್ತಿಯಾಗಿಲ್ಲ. ಸಿಬ್ಬಂದಿ ಕೊರತೆಯಿಂದ ಕೆಲವೆಡೆ 2-3 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಒಬ್ಬರೇ ನಿರ್ವಹಿಸುವ ಸ್ಥಿತಿ ಇದೆ. ಇಂತಹ ಕಡೆಗಳಲ್ಲಿ ರೈತರ ಸಮಸ್ಯೆಗೆ ಸ್ಪಂದಿಸಲು ತೆರಳುವಾಗ ಆಸ್ಪತ್ರೆಗೆ ಬೀಗ ಹಾಕುವುದು ಅನಿವಾರ್ಯ. ಅದೇ ಸಮಯದಲ್ಲಿ ಬೇರೆ ರೈತರು ಜಾನುವಾರು ತಂದರೆ ವೈದ್ಯರ ದಾರಿ ಕಾಯಲೇಬೇಕು.
ಜಿಲ್ಲೆಯಲ್ಲಿ ವೈದ್ಯರ ಹುದ್ದೆಗಳು ಖಾಲಿ ಇವೆ. ಆದರೆ ಸರ್ಕಾರ ಪಶು ಸಂಜೀವಿನಿ ಆಂಬ್ಯುಲೆನ್ಸ್ ಆರಂಭಿಸಿದ್ದರಿಂದ ಕಾರ್ಯ ಒತ್ತಡ ಕಡಿಮೆಯಾಗಿದೆ. ತುರ್ತು ಚಿಕಿತ್ಸೆಗಾಗಿ ರೈತರು ಕರೆ ಮಾಡಿದರೆ ಅವರ ಸ್ಥಳಕ್ಕೆ ತೆರಳಿ ಈ ಆಂಬ್ಯುಲೆನ್ಸ್ ಸೇವೆ ನೀಡಲಿದೆ. ಸಿಬ್ಬಂದಿ ಕೊರತೆ ನೀಗಿಸಲೆಂದೇ ಈ ಸೇವೆ ಆರಂಭವಾಗಿದೆ.*ರವಿ ಸಾಲಿಗೌಡರ, ಉಪನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಧಾರವಾಡ