ಬರ ನಿರ್ವಹಣೆ: ರಾಜ್ಯ ಸರ್ಕಾರ ವಿಫಲ

ravi kaalappa
Published on

ಮಡಿಕೇರಿ: ಬರ ನಿರ್ವಹಣೆ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿಯ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.


ರಾಜ್ಯ ಭೀಕರ ಬರಗಾಲವನ್ನು ಎದುರಿಸುತ್ತಿದ್ದು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾತ್ರ ನಮ್ಮ ರೈತರ ನೆರವಿಗೆ ಬಾರದೆ ಕಾಲ ಹರಣ ಮಾಡುತ್ತಿದೆ. ಸಂಪೂರ್ಣವಾಗಿ ರಾಜ್ಯದ ರೈತರನ್ನು ಕಡೆಗಣಿಸಿ ತಮಿಳುನಾಡಿಗೆ ನೀರನ್ನು ಹರಿಸಿ ತನ್ನ ರಾಜಕೀಯ ಮಿತ್ರ ಅಲ್ಲಿನ ಮುಖ್ಯ ಮಂತ್ರಿ ಸ್ಟಾಲೆನ್‌ರನ್ನು ತೃಪ್ತಿ ಪಡಿಸಿದೆ. ಈ ಹಿಂದೆ ರಾಜ್ಯದ ರೈತರು ಮತ್ತು ಭಾರತೀಯ ಜನತಾ ಪಕ್ಷ ತಮಿಳು ನಾಡಿಗೆ ನೀರು ಬಿಡುದನ್ನು ವಿರೋಧಿಸಿ ಸಾಕಷ್ಟು ಹೋರಾಟವನ್ನು ಮಾಡಿದ್ದರು ಸಹ ಸ್ಥಳೀಯರ ಭಾವನೆ ಗಳಿಗೆ ಬೆಲೆ ಕೊಡದೆ ರಾಜ್ಯದ ಕಾಂಗ್ರೆಸ್ ಸರ್ಕಾರ ನೀರು ಬಿಟ್ಟಿರುದೇ ಈ ಸಂಧಿಗ್ದ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ರಾಜ್ಯದ ಬರಗಾಲವನ್ನೆ ಬಂಡವಾಳ ಮಾಡಿಕೊಂಡ ಕಾಂಗ್ರೆಸ್ ಸರ್ಕಾರ, ತಮ್ಮ ಕಾರ್ಯಕರ್ತರ ಮೂಲಕ ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡುವ ದಂದೆಯನ್ನು ಮಾಡುತ್ತಿದೆ. ಕೊಡಗಿನಲ್ಲಿ ಜಿಲ್ಲಾಧಿಕಾರಿಗಳು ಬೆಳೆಗಾರರಿಗೆ ನದಿ ತೊರೆ ಕೆರೆಗಳಿಂದ ಕಾಫಿ ತೋಟಗಳಿಗೆ ನೀರು ಹರಿಸುದನ್ನು ನಿಷೇಧಿಸಿ ಆದೇಶ ಮಾಡಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.


ಜಿಲ್ಲೆಯಲ್ಲಿ ಕಾಫಿ ವಾರ್ಷಿಕ ಬೆಳೆಯಾಗಿದ್ದು, ಕಾಫಿ ಬೆಳೆಗಾರರು ಇಡೀ ವರ್ಷದಲ್ಲಿ ಕೇವಲ ೧ ತಿಂಗಳು ಮಾತ್ರ ನೀರನ್ನು ಬಳಸುತ್ತಿದ್ದಾರೆ. ಉಳಿದ ೧೧ ತಿಂಗಳು ಕಾವೇರಿ ನೀರು ಜಿಲ್ಲೆಯಿಂದ ಹರಿದು ಹೋಗುತ್ತಿದೆ. ಕಾಫಿಗೆ ನೀರು ಹಾಯಿಸಿ ಕಾಫಿ ಹೂ ಬಿಡದಿದ್ದಲ್ಲಿ ಕೊಡಗಿನ ರೈತರಿಗೆ ಜೀವನಕ್ಕೆ ಬೇರೆ ದಾರಿಯೆ ಇಲ್ಲದಂತಾಗುತ್ತದೆ. ಆದ್ದರಿಂದ ಕೂಡಲೇ ಸರ್ಕಾರ ಆದೇಶವನ್ನು ಹಿಂದಕ್ಕೆ ಪಡೆದು ಸ್ಥಳೀಯ ರೈತರಿಗೆ ನ್ಯಾಯ ಒದಗಿಸಿ ಕೊಡಬೇಕಾಗಿ ಅಗ್ರಹಿಸಿದ್ದಾರೆ.


ತಪ್ಪಿದಲ್ಲಿ ಸರ್ಕಾರ ಕಾಫಿ ಬೆಳೆಗಾರರಿಗೆ ಎಕರೆಗೆ ಇಂತಿಷ್ಟು ಎಂದು ಪರಿಹಾರ ನೀಡಬೇಕು. ಬೇಸಿಗೆಯ ನೀರಿನ ಆಹಾಕಾರ ನೀಗಿಸಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಕೊಡಗಿನ ರೈತರನ್ನು ಮತ್ತು ಕಾರ್ಮಿಕರನ್ನು ಒಗ್ಗೂಡಿಸಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುದೆಂದು ನಾಪಂಡ ರವಿಕಾಳಪ್ಪ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net