

ಮಂಡ್ಯ: ಪ್ರಸ್ತುತ ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಆಯಾ ದಿನವೇ ಬಗೆಹರಿಸಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.
ಬರಗಾಲಕ್ಕೆ ಸಂಬಂಧಿಸಿದಂತೆ ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಆನ್‌ಲೈನ್‌ನಲ್ಲಿ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಅವರು, ಬರ ನಿರ್ವಹಣೆ ಸಂಬಂಧ ಮುಖ್ಯಮಂತ್ರಿ ಹಾಗೂ ಪ್ರಾದೇಶಿಕ ಆಯುಕ್ತರು ಹಲವಾರು ಸೂಚನೆಗಳನ್ನು ನೀಡಿದ್ದಾರೆ. ಅವುಗಳ ವಿವರವನ್ನು ತಾಪಂ, ಗ್ರಾಪಂ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಅವುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದರು.
ಜಿಲ್ಲೆಯ ಎಲ್ಲ ಗ್ರಾಪಂ ಪಿಡಿಒಗಳು ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಶಾಲಾ ಶೌಚಗೃಹ ನಿರ್ಮಾಣ ಪ್ರಗತಿ ಪೂರ್ಣಗೊಳಿಸಬೇಕು. ಎನ್‌ಆರ್‌ಎಲ್‌ಎಂ ಶೆಡ್‌ಗಳ ನಿರ್ಮಾಣಕ್ಕೆ ನಿಗದಿಪಡಿಸಿರುವ ಗುರಿ ಸಾಧಿಸಬೇಕು. ಗ್ರಾಪಂನಲ್ಲಿ ಲಭ್ಯವಿರುವ ವಾಹನಗಳ ಮೂಲಕ ಎಲ್ಲ ಗ್ರಾಮಗಳಲ್ಲಿ ಕಸ ಸಂಗ್ರಹಿಸಿ ಶುಚಿತ್ವ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ದ್ರವ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರಗತಿ ಸಾಧಿಸಬೇಕು. ಮನರೇಗಾ ಯೋಜನೆಯಡಿ ನಿಯಮಾನುಸಾರ ಹೆಚ್ಚಿನ ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿ ಕೈಗೊಂಡು ಗುರಿಗನುಗುಣವಾಗಿ ಪ್ರಗತಿ ಸಾಧಿಸಿ ವರದಿ ನೀಡಬೇಕು ಎಂದು ಸೂಚಿಸಿದರು.
ಗ್ರಾಪಂ ತೆರಿಗೆ ವಸೂಲಾತಿ(ಡಿಸಿಬಿ)ಗೆ ಸಂಬಂಧಿಸಿದಂತೆ ಪ್ರಗತಿ ತೀವ್ರ ಕುಂಠಿತವಾಗಿದ್ದು, ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸಲು ಆನ್‌ಲೈನ್ ಹಾಗೂ ಪಿಒಎಸ್ ಮೂಲಕ ಕಡ್ಡಾಯವಾಗಿ ತೆರಿಗೆ ಸಂಗ್ರಹಿಸಬೇಕು. ವಿವಿಧ ವಸತಿ ಯೋಜನೆಗಳಡಿ ಪ್ರಸಕ್ತ ಸಾಲಿನಲ್ಲಿ ಮನೆಗಳನ್ನು ಪೂರ್ಣಗೊಳಿಸಲು ನಿಗದಿಪಡಿಸಿರುವ ಗುರಿ ಪೂರ್ಣಗೊಳಿಸಬೇಕು. ನಿವೇಶನ ಯೋಜನೆಯಡಿ ಜಮೀನು ಲಭ್ಯವಿರುವ ಗ್ರಾಪಂಗಳಲ್ಲಿ ಅರ್ಹರಿಗೆ ನಿವೇಶನ ಹಂಚಲು ಪ್ರಸ್ತಾವನೆ ಸಲ್ಲಿಸಬೇಕು. ಇ-ಸ್ವತ್ತು, ಸಕಾಲ, ದೂರದೃಷ್ಟಿ ಯೋಜನೆ, ಬರ ಪರಿಸ್ಥಿತಿ ನಿರ್ವಹಣೆ ಹಾಗೂ ಇನ್ನಿತರ ಅಭಿವೃದ್ಧಿ ಯೋಜನೆ ಬಗ್ಗೆ ಗಮನಹರಿಸಬೇಕು ಎಂದರು.