ಪೊನ್ನಂಪೇಟೆಗೂ ಕಾಡಿದೆ ಬರ

Drought has hit Ponnampet too
Published on

ಮಡಿಕೇರಿ:

ಕೊಡಗಿನಲ್ಲಿ ನಾಲ್ಕು ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿ ಒಂದು ತಾಲೂಕನ್ನು ಹೊರಗಿಟ್ಟಿರುವುದರ ಬಗ್ಗೆ ಜಿಲ್ಲೆಯಲ್ಲಿ ಚರ್ಚೆ ಶುರುವಾಗಿದೆ. ವಾಸ್ತವದಲ್ಲಿ ಪೊನ್ನಂಪೇಟೆ ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದು, ಇದರಿಂದಾಗಿ ಸಾಕಷ್ಟು ಹಾನಿಯೂ ಆಗಿದೆ. ವಾಡಿಕೆಯಂತೆ ಭತ್ತದ ನಾಟಿ ಕಾರ್ಯ ನಡೆಯದೆ ಬಹುತೇಕ ಕಡೆಗಳಲ್ಲಿ ಭತ್ತದ ಗದ್ದೆಗಳನ್ನು ಪಾಳು ಬಿಡಲಾಗಿದೆ. ಕಾಫಿಗೂ ಸಮಸ್ಯೆ ಆಗಿದ್ದು, ಸರ್ಕಾರದ ನಡೆ ಈ ವ್ಯಾಪ್ತಿಯ ಕಾಫಿ ಬೆಳೆಗಾರರು ಮತ್ತು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ತೀವ್ರ ಬರಪೀಡಿತ ೧೬೧ ತಾಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ ಮಡಿಕೇರಿ, ಕುಶಾಲನಗರ ಹಾಗೂ ವಿರಾಜಪೇಟೆ ತಾಲೂಕುಗಳು ಸ್ಥಾನ ಪಡೆದುಕೊಂಡಿದ್ದು, ಸಾಧಾರಣ ಬರಪೀಡಿತ ೩೪ ತಾಲೂಕುಗಳ ಪಟ್ಟಿಯಲ್ಲಿ ಸೋಮವಾರಪೇಟೆ ತಾಲೂಕು ಇದೆ. ಆದರೆ ಮಳೆಯ ತೀವ್ರ ಕೊರತೆ ಎದುರಿಸುತ್ತಿರುವ ಪೊನ್ನಂಪೇಟೆ ತಾಲೂಕು ಈ ಎರಡೂ ಪಟ್ಟಿಯಲ್ಲಿ ಇಲ್ಲ. ಮೊದಲ ಸುತ್ತಿನಲ್ಲಿ ತಮ್ಮ ತಾಲೂಕಿನ ಹೆಸರು ಇಲ್ಲದಿರುವುದು ಸ್ಥಳೀಯರನ್ನು ಸಿಡಿದೇಳುವಂತೆ ಮಾಡಿದೆ.

ಗೋಣಿಕೊಪ್ಪದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ಘಟಕದ ಮಾಹಿತಿ ಪ್ರಕಾರ ಗುರುವಾರ (ಸೆ.೧೪)ನ ತನಕ ಪೊನ್ನಂಪೇಟೆಯಲ್ಲಿ ಶೇ. ೫೩ರಷ್ಟು ಮಳೆಯ ಕೊರತೆ ಕಂಡು ಬಂದಿದೆ. ವಾಡಿಕೆಯ ೧೭೦೪.೯ ಮಿಮೀ ಮಳೆಯಾಗಬೇಕಿದ್ದಲ್ಲಿ ೮೦೯.೭ ಮಿಮೀ ಮಾತ್ರ ಮಳೆ ಆಗಿದೆ. ವಿಶೇಷ ಎಂದರೆ ರಾಜ್ಯ ಸರ್ಕಾರದ ತೀವ್ರ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಇರುವ ಕುಶಾಲನಗರಲ್ಲಿ ಶೇ. ೫ರಷ್ಟು ಹೆಚ್ಚು ಮಳೆ ಬಂದಿದೆ. ವಾಡಿಕೆಯ ೫೨೪.೮ ಮಿಮೀ ಮಳೆಯಾಗುವಲ್ಲಿ ೫೫೧.೬ ಮಿಮೀ ಮಳೆ ಆಗಿದೆ.

ಸಾಧಾರಣ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಇರುವ ಸೋಮವಾರಪೇಟೆಯಲ್ಲಿ ಶೇ. ೩೮ರಷ್ಟು ಕಡಿಮೆ ಮಳೆ ಸುರಿದಿದೆ. ೧೭೫೫ ಮಿಮೀ ಮಳೆಯಾಗಬೇಕಿದ್ದಲ್ಲಿ ೧೦೮೭.೨ ಮಿಮೀ ಮಳೆಯಷ್ಟೇ ದಾಖಲಾಗಿದೆ. ತೀವ್ರ ಬರಪೀಡಿತ ತಾಲೂಕುಗಳಲ್ಲಿ ಒಂದಾದ ಮಡಿಕೇರಿಯಲ್ಲಿ ಶೇ ೩೦ರಷ್ಟು ಕಡಿಮೆ ಮಳೆಯಾಗಿದೆ. ವಾಡಿಕೆಯ ೨೮೫೧ ಮಿಮೀ ಮಳೆ ಬರಬೇಕಿದ್ದಲ್ಲಿ ೧೯೯೭.೪ ಮಿಮೀ ಮಾತ್ರ ಮಳೆ ಬಂದಿದೆ. ವಿರಾಜಪೇಟೆಯಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದರೆ ಶೇ. ೫೭ರಷ್ಟು ಮಳೆಯ ಪ್ರಮಾಣ ಕಡಿಮೆ ಆಗಿದೆ. ೨೦೨೧ ಮಿಮೀ ವಾಡಿಕೆಯ ಮಳೆ ಬರಬೇಕಿದ್ದಲ್ಲಿ ಕೇವಲ ೮೮೧.೭ ಮಿಮೀ ಮಾತ್ರ ಮಳೆ ಬಂದಿದೆ.

ಮಳೆ ಇಲ್ಲದ ಕಾರಣಕ್ಕೆ ಪೊನ್ನಂಪೇಟೆ ತಾಲೂಕಿನಲ್ಲಿ ಹರಿಯುವ ಲಕ್ಷ್ಮಣತೀರ್ಥ ಸೇರಿದಂತೆ ಪ್ರಮುಖ ನದಿ ಮತ್ತು ತೊರೆಗಳಲ್ಲಿ ನೀರಿನ ಹರಿವು ಕ್ಷೀಣಿಸಿದೆ. ಅಂತರ್ಜಲದ ಮೇಲೂ ಇದು ಪರಿಣಾಮ ಬೀರಿದ್ದು ಕಾಫಿ ತೋಟಕ್ಕೆ ನೀರು ಹಾಯಿಸಲು ಸಮಸ್ಯೆ ಆಗುತ್ತಿದೆ. ಬಹುತೇಕ ಕಾಫಿ ತೋಟಗಳಲ್ಲಿ ಕಾಫಿ ಕಾಯಿ ಉದುರುವುದು ಸಾಮಾನ್ಯ ದೃಶ್ಯವಾಗಿದೆ. ಕರಿಮೆಣಸು ಬೆಳೆಯ ಮೇಲೂ ಮಳೆ ಕೊರತೆ ದುಷ್ಪರಿಣಾಮ ಉಂಟು ಮಾಡಿದೆ. ಕಾಫಿ ಇಳುವರಿ ಮಾತ್ರವಲ್ಲದೆ ಕಾಫಿ ಕೈ ಕೊಟ್ಟಾಗ ಕೈ ಹಿಡಿಯುತ್ತಿದ್ದ ಕರಿಮೆಣಸು ಫಸಲು ಕೂಡ ಬಾರಿ ಕಡಿಮೆಯಾಗುವ ಸಾಧ್ಯತೆ ಇದ್ದು, ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಕೊಡಗಿನಲ್ಲಿ ಮಳೆಯ ಕೊರತೆ ಎದುರಿಸುತ್ತಿರುವ ತಾಲೂಕುಗಳ ಪಟ್ಟಿಯಲ್ಲಿ ವಿರಾಜಪೇಟೆಯ ನಂತರದ ಸ್ಥಾನದಲ್ಲಿ ಪೊನ್ನಂಪೇಟೆ ತಾಲೂಕು ಇದೆ. ಆದರೂ ಬರಪೀಡಿತ ತಾಲೂಕಾಗಿ ಸರ್ಕಾರ ಪರಿಗಣಿಸದಿರುವ ಕಾರಣದ ಹಿಂದಿನ ಲೆಕ್ಕಾಚಾರ ಅರ್ಥ ಆಗುತ್ತಿಲ್ಲ ಎನ್ನುತ್ತಾರೆ ರೈತ ಮುಖಂಡರು. ಬರ ಘೋಷಣೆಗೆ ಸಂಬಂಧಿಸಿದಂತೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮಾವಳಿಗಳನ್ನು ಸರ್ಕಾರ ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಜತೆಗೆ ಸ್ಥಳೀಯ ಆಡಳಿತದ ಪ್ರಸ್ತಾಪವನ್ನು ಸರ್ಕಾರ ಪಡೆಯಬೇಕಾಗುತ್ತದೆ. ಆದರೆ ಮಾಹಿತಿ ಮಾತ್ರ ಪಡೆದಿರುವುದರಿಂದ ಪೊನ್ನಂಪೇಟೆ ತಾಲೂಕಿನ ಬರ ಪರಿಸ್ಥಿತಿ ಅಂದಾಜಿಸಲು ಸಾಧ್ಯವಾಗಿರಲಿಕ್ಕಿಲ್ಲ ಎನ್ನುವ ಅಧಿಕಾರಿಗಳು, ಮುಂದಿನ ಸುತ್ತಿನಲ್ಲಿ ಸರಿಯಾಗಬಹುದು ಎನ್ನುವ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಸರ್ಕಾರ ಬರಪೀಡಿತ ತಾಲೂಕುಗಳ ಪಟ್ಟಿ ಪ್ರಕಟ ಮಾಡುತ್ತಿದ್ದಂತೆಯೇ ಕೊಡಗಿನ ಹಲವೆಡೆ ಗುರುವಾರದಿಂದ ಮಳೆ ಶುರುವಾಗಿದೆ. ಇನ್ನೂ ಕೆಲವು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಹವಾಮಾನ ತಜ್ಞರು. ಭಾಗಮಂಡಲ, ತಲಕಾವೇರಿ, ನಾಪೋಕ್ಲು ವ್ಯಾಪ್ತಿಯಲ್ಲಿ ಜೋರಾಗಿ ಮಳೆ ಸುರಿಯವ ಸಾಧ್ಯತೆ ಬಗ್ಗೆಯೂ ಮುನ್ನೆಚ್ಚರಿಕೆ ಕೊಟ್ಟಿದ್ದಾರೆ. ಆದರೆ ಈ ಮಳೆ ಕೃಷಿಗೆ ಪೂರಕವಲ್ಲ ಎನ್ನುವುದು ರೈತರ ಅಭಿಪ್ರಾಯ.

ಮುಂದಿನ ೫ ದಿನಗಳ ಹವಾಮಾನ ಮುನ್ಸೂಚನೆಯಂತೆ ಕೊಡಗು ಜಿಲ್ಲೆಯ ಅನೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಹಾಗೂ ಘಟ್ಟ ಪ್ರದೇಶಗಳ ಆಸುಪಾಸಿನಲ್ಲಿ ಇರುವ ಗ್ರಾಮಗಳಿಗೆ ಅಲ್ಲಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಈ ಮಳೆ ಬಹುತೇಕ ಮಧ್ಯಾಹ್ನದ ಮೇಲೆ ಬರುವ ಲಕ್ಷಣಗಳು ಹೆಚ್ಚಿದೆ. ಕುಶಾಲನಗರ ತಾಲೂಕಿಗೆ ಮಳೆಯ ಸಾಧ್ಯತೆ ಕಡಿಮೆ ಇದೆ.
ಎಸ್.ಕೆ. ಚಂಗಪ್ಪ, ಹವಾಮಾನ ಪರಿವೀಕ್ಷಕ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪ

ಬರಪೀಡಿತ ಪ್ರದೇಶಗಳ ಮೊದಲ ಹಂತದ ಸರ್ವೆಯಲ್ಲಿ ಪೊನ್ನಂಪೇಟೆ ತಾಲೂಕು ಇರಲಿಲ್ಲ. ಹಾಗಾಗಿ ಈ ಸುತ್ತಿನಲ್ಲಿ ಪೊನ್ನಂಪೇಟೆ ಹೆಸರು ಪ್ರಕಟ ಆಗಿಲ್ಲ. ಮುಂದೆ ಸಂಪುಟ ಉಪಸಮಿತಿ ಸಭೆಯಲ್ಲಿ ಚರ್ಚೆಗೆ ಬರಲಿದ್ದು, ಮುಂದಿನ ಹಂತದಲ್ಲಿ ಬರಪೀಡಿತ ತಾಲೂಕುಗಳ ಪಟ್ಟಿಗೆ ಪೊನ್ನಂಪೇಟೆ ಸೇರ್ಪಡೆ ಆಗಲಿದೆ.
ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net