ಮೈಸೂರಿನಲ್ಲಿ ಈಜುಕೊಳಗಳಿಗೆ ಬರ

swimming pool
Published on

ಅವಿನಾಶ್ ಜೈನಹಳ್ಳಿ ಮೈಸೂರು
ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಅನೇಕ ಯೋಜನೆಗಳು ಬರೀ ಚರ್ಚೆ ಹಾಗೂ ಘೋಷಣೆ ಹಂತದಲ್ಲಿಯೇ ಉಳಿಯುತ್ತಿವೆ. ಮೈಸೂರು ಮಹಾನಗರ ಪಾಲಿಕೆ ಈ ಬಾರಿ ಬಜೆಟ್‌ನಲ್ಲಿ ನಾರಾಯಣಶಾಸ್ತ್ರಿ ರಸ್ತೆಯ ಸ್ವಾತಂತ್ರೃ ಹೋರಾಟಗಾರರ ಉದ್ಯಾನದ ಪಕ್ಕದಲ್ಲಿ(ಬಾಹುಸಾರ್ ಈಜುಕೊಳ)ಮತ್ತೆ ಈಜುಕೊಳ ನಿರ್ಮಾಣ ಮಾಡುವುದಾಗಿ ಘೋಷಿಸಿರುವ ಯೋಜನೆ ಇದಕ್ಕೆ ನಿದರ್ಶನವಾಗಿದೆ.


ಬಜೆಟ್‌ನಲ್ಲಿ ಈಜುಕೊಳ ನಿರ್ಮಾಣ ಮಾಡಲಾಗುತ್ತದೆ ಎಂದಷ್ಟೇ ಘೋಷಣೆ ಮಾಡಲಾಗಿದೆ. ಆದರೆ, ಅನುದಾನ ಎಷ್ಟು? ಈಜು ಕೊಳದ ಮಾದರಿ, ಯಾವ ಅದನುದಾನ? ಎಂಬ ವಿಷಯದ ಬಗ್ಗೆ ತಿಳಿಸಿಲ್ಲ. ಬಜೆಟ್ ಮಂಡನೆ ಆಗಿ ನಾಲ್ಕು ತಿಂಗಳಾದರೂ ಈ ಸಂಬಂಧ ಯಾವುದೇ ಬೆಳವಣಿಗೆಗಳಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡ ಚರ್ಚೆ ನಡೆಸಿಲ್ಲ. ಇತ್ತ ನಗರದ ಹೃದಯ ಭಾಗದಲ್ಲಿ ಈಜುಕೊಳ ನಿರ್ಮಾಣವಾಗಲಿದೆ ಎಂಬ ಕನಸು ಕಾಣುತ್ತಿರುವ ಈಜುಪ್ರಿಯರಿಗೆ ನಿರಾಸೆ ಉಂಟಾಗಿದೆ.

ನಮ್ಮ ಮನೆ ಸಮೀಪ ಈಜುಕೊಳ ನಿರ್ಮಿಸಲು ಪಾಲಿಕೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಮನೆ ಬಳಿಯೇ ಈಜುಕೊಳ ನಿರ್ಮಾಣವಾಗುತ್ತಿದೆ ಎಂದು ಖುಷಿಯಾಗಿತ್ತು. ಆದರೆ ಈಜುಕೊಳ ನಿರ್ಮಾಣ ಸಂಬಂಧ ಇನ್ನೂ ಯಾವುದೇ ಚರ್ಚೆಯಾಗಿಲ್ಲ. ಈ ಹಿಂದೆಯೂ ಸದರಿ ಜಾಗದಲ್ಲೇ ಈಜುಕೊಳ ನಿರ್ಮಾಣ ಸಂಬಂಧ ಭೂಮಿಪೂಜೆ ಮಾಡಲಾಗಿತ್ತು. ಆದರೆ, ಇನ್ನೂ ಯಾವುದೇ ಕೆಲಸ ಆರಂಭವಾಗದೆ ಇರುವುದು ಬೇಸರ ತರಿಸಿದೆ ಎಂದು ದೇವರಾಜ ಮೊಹಲ್ಲಾ ನಿವಾಸಿ ಹರೀಶ್‌ಗೌಡ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಈಜುಕೊಳಗಳಿಗೆ ಬರ:

ಹೆಚ್ಚು ಕ್ರೀಡಾ ಚಟುವಟಿಕೆಗಳು ನಡೆಯುವ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈಜುಕೊಳಗಳ ಬರ ಕಾಡುತ್ತಿದೆ. ಸರಸ್ವತಿಪುರಂನಲ್ಲಿರುವ ಮೈಸೂರು ವಿವಿ ಕೊಳ, ಚಾಮುಂಡಿ ವಿಹಾರ ಕ್ರೀಡಾಂಗಣ ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈಜುಕೊಳ ಮಾತ್ರ ಸಾರ್ವಜನಿಕರ ಬಳಕೆಗೆ ಮುಕ್ತವಾಗಿವೆ. ಜೆ.ಪಿ.ನಗರದ ಪಂಡಿತ ಪುಟ್ಟರಾಜು ಗವಾಯಿ ಕ್ರೀಡಾ ಸಂಕೀರ್ಣದಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿ ಖಾಸಗಿಯವರಿಗೆ ಗುತ್ತಿಗೆ ನೀಡಿರುವ ಈಜುಕೊಳ ಮಾತ್ರ ಸದ್ಯ ನಗರದಲ್ಲಿ ಪಾಲಿಕೆ ವತಿಯಿಂದ ಈಜು ಪ್ರಿಯರ ಮನ ತಣಿಸುತ್ತಿವೆ. ಇದು ಚಿಕ್ಕ ಈಜುಕೊಳವಾಗಿದ್ದು, ಅಭ್ಯಾಸ ಮಾಡಲು ಕಷ್ಟವಾಗಿದೆ. ಈ ಪೈಕಿ ಸರಸ್ವತಿಪುರಂನಲ್ಲಿರುವ ಮೈಸೂರು ವಿವಿ ಕೊಳದಲ್ಲಿ ಮೂರು ತಿಂಗಳಿಂದ ಕಾಮಗಾರಿ ನಡೆಯುತ್ತಿದೆ.


ಮೈಸೂರು ನಗರದಲ್ಲಿ 14 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ವಿಶ್ವದ ಪ್ರಮುಖ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು, ಮಾಲ್‌ಗಳು, ಹೋಟೆಲ್‌ಗಳು, ಕೈಗಾರಿಕೆಗಳು ತಲೆ ಎತ್ತುತ್ತಿವೆ. ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಬೆಂಗಳೂರಿನ ಬಳಿಕ ಅತಿ ಹೆಚ್ಚು ಕ್ರೀಡಾ ಚಟುವಟಿಕೆಗಳು ನಡೆಯುವುದು ಇಲ್ಲಿಯೇ. ಆದರೆ, ಸ್ಪರ್ಧಿಗಳಿಗೆ ಬೇಕಿರುವ ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳವೇ ಇಲ್ಲವಾಗಿದೆ. ಇರುವ ಬೆರಳೆಣಿಕೆ ಕೊಳಗಳಲ್ಲೇ ಸಾವಿರಾರು ಜನ ಈಜಬೇಕಾಗಿದೆ. ಆದಷ್ಟು ಬೇಗ ಘೋಷಣೆಯಂತೆ ನಗರಪಾಲಿಕೆ ವತಿಯಿಂದ ಈಜುಕೊಳ ನಿರ್ಮಾಣವಾಗಿ ಈಜು ಪ್ರಿಯರ ಮನತಣಿಸಬೇಕಿದೆ.

ಹಳ್ಳ ಹಿಡಿದ ಹಳೆಯ ಯೋಜನೆ:

ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಬ್ಲಿಕ್-ಪ್ರೈವೇಟ್ ಪಾರ್ಟಿಸಿಪೇಷನ್) ಯೋಜನೆಯಡಿ ನಗರದ ನಾಲ್ಕು ಕಡೆ ಈಜುಕೊಳ ನಿರ್ಮಿಸುವ ಸಂಬಂಧ ಆರು ವರ್ಷದ ಹಿಂದೆ ಘೋಷಣೆ ಮಾಡಿದ್ದ ಮಹಾನಗರ ಪಾಲಿಕೆಯ ಯೋಜನೆ ಹಳ್ಳ ಹಿಡಿದಿದೆ. ನಗರದ ಈಜುಪಟುಗಳಿಗೆ ಪ್ರೋತ್ಸಾಹ ನೀಡಲು ಪಾಲಿಕೆ ವತಿಯಿಂದ ಶಾರದಾದೇವಿನಗರ, ಹೆಬ್ಬಾಳ, ನಾರಾಯಣಶಾಸ್ತ್ರಿ ರಸ್ತೆ (ಬಾಹುಸಾರ್ ಈಜುಕೊಳ), ಕನ್ನೇಗೌಡ ಕ್ರೀಡಾಂಗಣದಲ್ಲಿ ಈಜುಕೊಳ ನಿರ್ಮಿಸಲು ಉದ್ದೇಶಿಸಲಾಗಿತ್ತು. ಶಾರದಾದೇವಿನಗರ ಮತ್ತು ನಾರಾಯಣಶಾಸ್ತ್ರಿ ರಸ್ತೆಯಲ್ಲಿ (ಬಾಹುಸಾರ್) ಈಜುಕೊಳ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿತ್ತು. ಆದರೆ, ಎರಡೂ ಕಡೆ ಈಜುಕೊಳ ನಿರ್ಮಾಣವಾಗಲಿಲ್ಲ. ಸರ್ಕಾರದ ಅನುಮತಿಗಾಗಿ ಮೂರು ವರ್ಷದ ಹಿಂದಿಯೇ ಪಾಲಿಕೆ ಪತ್ರ ಬರೆದಿತ್ತು. ಆದರೆ, ತಾಂತ್ರಿಕ ದೋಷದ ಕಾರಣ ಸದರಿ ಯೋಜನೆಗೆ ಸರ್ಕಾರ ಅನುಮತಿ ನೀಡಲು ಅಂದೇ ನಿರಾಕರಿಸಿತ್ತು. ಹೀಗಾಗಿ, ಪಾಲಿಕೆಯ ಮಹತ್ವಾಕಾಂಕ್ಷಿ ಯೋಜನೆ ಪ್ರಾರಂಭದ ಹಂತದಲ್ಲೇ ಕೊನೆಗಂಡಿತು. ತಮ್ಮ ಬಡಾವಣೆಗಳಲ್ಲೇ ಈಜುವ ಬಯಕೆ ಹೊಂದಿದ್ದ ಈಜುಪ್ರಿಯರ ಆಸೆಗೆ ತಣ್ಣೀರು ಎರಚಿದಂತಾಗಿದೆ. ಯೋಜನೆ ಪ್ರಕಾರ, ಪಾಲಿಕೆಯು ಖಾಸಗಿಯವರಿಗೆ ತನ್ನ ಜಾಗ ನೀಡಬೇಕು. ಆ ಜಾಗದಲ್ಲಿ ಖಾಸಗಿಯವರು ತಮ್ಮ ಹಣದಲ್ಲಿಯೇ ಈಜುಕೊಳ ನಿರ್ಮಿಸಬೇಕಾಗಿತ್ತು.

ನಾರಾಯಣಶಾಸ್ತ್ರಿ ರಸ್ತೆಯ ಸ್ವಾತಂತ್ರೃ ಹೋರಾಟಗಾರರ ಉದ್ಯಾನದ ಪಕ್ಕದಲ್ಲಿ(ಬಾಹುಸಾರ್ ಈಜುಕೊಳ)ಮತ್ತೆ ಈಜುಕೊಳ ನಿರ್ಮಾಣ ಮಾಡುವುದಾಗಿ ಈ ಬಾರಿಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೇವೆ. ಈ ಸಂಬಂಧ ಶೀಘ್ರದಲ್ಲೇ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಲಾಗುತ್ತದೆ. ನಮ್ಮಲ್ಲಿ ಅನುದಾನದ ಕೊರತೆಯಾದರೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಬ್ಲಿಕ್-ಪ್ರೈವೇಟ್ ಪಾರ್ಟಿಸಿಪೇಷನ್)ದಲ್ಲಿ ಈಜುಕೊಳ ನಿರ್ಮಿಸಲಾಗುತ್ತದೆ.-ಶಿವಕುಮಾರ್, ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net