ಬಾರದ ಮಳೆ, ಕುರಿ-ಮೇಕೆಗೆ ಆಹಾರವಾದ ಬೆಳೆ

BARA
ಸಂಡೂರು ತಾಲೂಕಿನ ಸೋಮೆನಹಳ್ಳಿಯಲ್ಲಿ ಕೃಷಿ ಅಧಿಕಾರಿಗಳು ಬೆಳೆ ಹಾನಿ ಸಮೀಕ್ಷೆ ನಡೆಸುತ್ತಿರುವ ವೇಳೆ ಮೆಕ್ಕೆಜೋಳ ಬೆಳೆಯಲ್ಲಿ ಕುರಿ ಮೇಯಿಸುತ್ತಿರುವುದು.
Published on

ಬಳ್ಳಾರಿ: ಜಿಲ್ಲೆಯ ಐದು ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದ್ದು, ಸರ್ಕಾರ ಕೂಡ ಎಲ್ಲ ತಾಲೂಕುಗಳನ್ನು ಬರಪೀಡತವೆಂದು ಘೋಷಣೆ ಮಾಡಿದೆ. ಬಿತ್ತನೆಗೊಂಡ ಬೆಳೆ ಕೈಗೆ ಸಿಗದೆ ಕುರಿ, ಮೇಕೆ, ಜಾನುವಾರುಗಳಿಗೆ ಆಹಾರವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಬೆಳೆಹಾನಿ ಸಮೀಕ್ಷೆ ನಡೆಸುತ್ತಿದ್ದು ಒಟ್ಟು 73,813 ಹೆಕ್ಟೇರ್ ಬೆಳೆ ನಷ್ಟ ವಾಗಿರುವ ಬಗ್ಗೆ ಕೃಷಿ ಇಲಾಖೆ ಸರ್ಕಾರಕ್ಕೆ ವರದಿ ನೀಡಿದೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 1.73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ ಶೇ.73 ಬಿತ್ತನೆ ಆಗಿದ್ದು, ಬಿತ್ತನೆ ನಂತರ ವರುಣನ ಅವಕೃಪೆಯಿಂದಾಗಿ ಬೆಳೆ ಮಣ್ಣುಪಾಲಾಗುತ್ತಿದೆ. 68,096 ಹೆಕ್ಟೇರ್ ಕೃಷಿ ಮತ್ತು 7,381 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿ ಆಗಿವೆ. ಮೆಕ್ಕೆಜೋಳ, ಸಜ್ಜೆ, ತೊಗರಿ, ಬೆಳೆಕಾಳು, ವಾಣಿಜ್ಯ ಬೆಳೆಗಳು, ಆಹಾರ ಧಾನ್ಯಗಳು ಭಾಗಶಃ ಹಾನಿಯಾಗಿವೆ.

73,813 ಹೆಕ್ಟೇರ್ ಬೆಳೆನಷ್ಟ

ಜಿಲ್ಲೆಯಲ್ಲಿ 68,096 ಹೆಕ್ಟೇರ್ ವಾಣಿಜ್ಯ, 5716 ಹೆಕ್ಟೇರ್ ತೋಟಗಾರಿಕೆ ಸೇರಿ ಒಟ್ಟು 73,813 ಹೆಕ್ಟೇರ್ ಬೆಳೆ ಹಾನಿ ಆಗಿದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಹತ್ತಿ 26,556 ಹೆಕ್ಟೇರ್ ಪೈಕಿ 22,250 ಹೆಕ್ಟೇರ್ ಬೆಳೆ ನೆಲಕಚ್ಚಿದೆ. ಮೆಕ್ಕೆಜೋಳ 17,389, ಭತ್ತ 11,791, ತೊಗರಿ 3,707, ಜೋಳ 2,066, ಶೇಂಗಾ 4200, ಭತ್ತ 11,791, ಕಬ್ಬು 420, ಸೂರ್ಯಕಾಂತಿ 213, ಮೆಣಸಿನಕಾಯಿ 5699, ಟೊಮ್ಯಾಟೊ 8 ಹಾಗೂ 9 ಹೆಕ್ಟೇರ್ ಈರುಳ್ಳಿ ಬೆಳೆ ಮಳೆ ಕೊರತೆಯಿಂದ ನಷ್ಟವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

569.23 ಕೋಟಿ ರೂ. ಹಾನಿ

ಬರದಿಂದಾಗಿ ಜಿಲ್ಲೆಯಲ್ಲಿ 569.23 ಕೋಟಿ ರೂ. ಬೆಳೆ ಹಾನಿ ಆಗಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಮುಖ್ಯವಾಗಿ ಭತ್ತ ಹಾಗೂ ಮೆಣಸಿನಕಾಯಿ ಬೆಳೆಯುವುದು ಹೆಚ್ಚು. ಮಳೆ ಇಲ್ಲದೆ ಜಲಾಶಯದಲ್ಲೂ ನೀರಿನ ಕೊರತೆ ಕಾಡುತ್ತಿದ್ದು, ರೈತರು ಬೆಳೆದ ಬೆಳೆಗಳು ನೀರಿಲ್ಲದೆ ಸಂಪೂಣ ಬಾಡುತ್ತಿವೆ. ರೇಷ್ಮೆ ಕೃಷಿಗೂ ಬರ ತಟ್ಟಿದ್ದು, 14,748 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಅದರ ಅಂದಾಜು 17.18 ಕೋಟಿ ರೂ. ಆಗಿದೆ. ಬಳ್ಳಾರಿ, ಸಿರಗುಪ್ಪ ಹಾಗೂ ಸಂಡೂರು ತಾಲೂಕಿನಲ್ಲಿ ಹೆಚ್ಚಾಗಿ ಹಾನಿಯಾಗಿದೆ ಎಂದು ಜಂಟಿ ಸಮೀಕ್ಷೆಯಿಂದ ತಿಳಿದು ಬಂದಿದೆ.

ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಕೆ

ಜಿಲ್ಲೆಯ ಬೆಳೆ ಹಾನಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಮಾರ್ಗಸೂಚಿಯಂತೆ ಶೇ.33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಹಾನಿ ಆಗಿರುವ ಕುರಿತು ಸಮೀಕ್ಷೆಯಿಂದ ಬಹಿರಂಗಗೊಂಡಿದೆ. ಮಳೆಯಾಶ್ರಿತ ಪ್ರದೇಶದ ಬೆಳೆಗಳಿಗೆ ಹೆಕ್ಟೇರ್‌ಗೆ 8500 ರೂ., ನೀರಾವರಿ ಪ್ರದೇಶದ ಬೆಳೆಗಳಿಗೆ 17 ಸಾವಿರ ರೂ., ತೋಟಗಾರಿಕೆ ಬೆಳೆಗಳಿಗೆ 17 ಸಾವಿರ ರೂ., ಬಹುವಾರ್ಷಿಕ ಬೆಳೆಗಳಿಗೆ 22 ಸಾವಿರ ರೂ.ನಂತೆ ಪರಿಹಾರ ನೀಡಲು ಸರ್ಕಾರ ಸೂಚನೆ ನೀಡಿದ್ದು, ಅದರಂತೆ ಜಿಲ್ಲೆಯಲ್ಲಿ 78.19 ಕೋಟಿ ರೂ. ಪರಿಹಾರ ಧನ ಬರಬೇಕಿದೆ.

ಜಿಲ್ಲೆಯಲ್ಲಿ ಬರ ಪೀಡಿತ ತಾಲೂಕುಗಳ ಘೋಷಣೆಯಾದ ಬೆನ್ನಲ್ಲೇ ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸರ್ಕಾರದಿಂದ ರೈತರಿಗೆ ನೇರವಾಗಿ ಪರಿಹಾರ ಸೌಲಭ್ಯ ದೊರಕಲಿದೆ.ಎನ್.ಕೆಂಗೇಗೌಡ, ಉಪ ಕೃಷಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net